ಚಾಮರಾಜನಗರ: ತನ್ನ ಶಕ್ತಿ, ಚತುರಮತಿ, ಸೂಕ್ಷ್ಮ ಬೇಟೆಗಾರನ ಬಲವನ್ನು ತೋರಿಸಿರುವ ಬಂಡೀಪುರದ ಶ್ವಾನ ರಾಣಾನಂತೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆಗಾರರ ಸೊಕ್ಕಡಗಿಸಲು ಝಾನ್ಸಿ ಎಂಟ್ರಿ ಕೊಡುತ್ತಿದ್ದಾಳೆ.
ಬಂಡೀಪುರದಲ್ಲಿ ತನ್ನ ಪರಾಕ್ರಮ ಮೆರೆಯುತ್ತಿರುವ ರಾಣಾದಂತೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಝಾನ್ಸಿ ಎಂಬ ಜರ್ಮನ್ ಶೆಫರ್ಡ್ ತಳಿಯ ಶ್ವಾನ ಕೆಲವೇ ತಿಂಗಳುಗಳಲ್ಲಿ ಎಂಟ್ರಿ ಕೊಡಲಿದೆ.
ಹರಿಯಾಣದ ಪಂಚಕುಲದಲ್ಲಿರುವ ಸ್ವಯಂ ಸೇವಾ ಸಂಸ್ಥೆ ಟ್ರಾಫಿಕ್ ಮತ್ತು ಡಬ್ಲೂಡಬ್ಲೂಎಫ್-ಇಂಡಿಯಾದಿಂದ ಇಂಡೋ ಟಿಬೆಟಿನ್ ಬಾರ್ಡರ್ ಪೊಲೀಸ್ ಫೋರ್ಸ್ (ಬಿಟಿಸಿ-ಐಟಿಬಿಪಿ) ಶಿಬಿರದಲ್ಲಿ "14 ಸ್ನಿಫರ್ ಡಾಗ್" ಮತ್ತು 28 ಮಂದಿ ಹ್ಯಾಂಡ್ಲರ್ಸ್‌ಗಳಿಗೆ ತರಬೇತಿ ನೀಡಲಾಗುತ್ತಿದ್ದು, ಶಿಬಿರದಲ್ಲಿ 8 ತಿಂಗಳ ಝಾನ್ಸಿ ಹೆಸರಿನ ಜರ್ಮನ್ ಶಫರ್ಡ್ ಶ್ವಾನ ಮತ್ತು ಬಿಆರ್‌ಟಿ ಸಿಬ್ಬಂದಿಯಾದ ಬಸವರಾಜು, ಸಿದ್ದರಾಮಣ್ಣ ಎಂಬುವವರಿಗೂ ತರಬೇತಿ ಕೊಡಲಾಗುತ್ತಿದೆ.