ಚಾಮರಾಜನಗರ:ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆ ಜಿಲ್ಲೆಯಲ್ಲಿ ಅವಾಂತರವೇ ಸೃಷ್ಟಿ ಮಾಡಿದೆ.
ಒಂದೆಡೆ ಕಟಾವಿಗೆ ಬಂದಿದ್ದ ಸಾವಿರಾರು ಎಕರೆ ಫಸಲು ಹಾನಿಗೊಳಗಾಗಿ ರೈತರು ನಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಮಹಾಮಳೆಗೆ ತುಂಬಿ ಹರಿಯುತ್ತಿರುವ ಹಳ್ಳ-ಕೊಳ್ಳಗಳಿಂದ ಒಂದೂರಿನಿಂದ ಮತ್ತೊಂದೂರಿಗೆ ಹೋಗಲು ಶಾಲಾ-ಕಾಲೇಜು ಮಕ್ಕಳು ಪಾಲಕರ ಹೆಗಲನ್ನೇ ಸೇತುವೆ ಮಾಡಿಕೊಳ್ಳಬೇಕಿದೆ.
ಚಾಮರಾಜನಗರದಲ್ಲಿ ಮಳೆ ತಂದ ಫಜೀತಿ ಚೆಕ್ಕಚನ್ನೇಗೌಡ ಗ್ರಾಮದಿಂದ ಮೀಣ್ಯಂ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕಾಲುವೆ ರೀತಿ ನೀರು ಹರಿಯುತ್ತಿರುವುದರಿಂದ ಶಾಲಾ ಮಕ್ಕಳನ್ನು ಪೋಷಕರು ತಮ್ಮ ಹೆಗಲ ಮೇಲೆ ಹೊತ್ತೊಯ್ದು ಶಾಲೆಗೆ ಬಿಡುವಂತಾಗಿದೆ.
ಗ್ರಾಮೀಣ ಭಾಗದಲ್ಲಿ ಅನೈರ್ಮಲ್ಯ:
ಸತತ ಮಳೆಗೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ರಸ್ತೆಗಳಂತೂ ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ನಿಂತ ನೀರಿನಿಂದ ಆಸ್ಪತ್ರೆ ಗಬ್ಬೆದ್ದು ನಾರುತ್ತಿದೆ ಎಂದು ಗ್ರಾಮಸ್ಥ ಶಿವಪ್ಪ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಕೊಳ್ಳೇಗಾಲ, ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿನ ಹತ್ತಾರು ಗ್ರಾಮಗಳ ಮುಖ್ಯ ರಸ್ತೆಗಳು ಕೆಸರು ಗದ್ದೆಗಳಾಗಿವೆ. ಬೈಕ್ ಸವಾರರಂತೂ ಸಂಚರಿಸಲು ಹರಸಾಹಸ ಪಡಬೇಕಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು. ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
20 ತಾಸು ರಸ್ತೆ ಬಂದ್- ಹತ್ತಾರು ಮನೆ ಕುಸಿತ:
ಇನ್ನೊಂದೆಡೆ, ಸತತ ಮಳೆ ಜನರನ್ನು ಇನ್ನಿಲ್ಲದಂತೆ ಹೈರಾಣಾಗಿಸಿದೆ. ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ನಾಲ್ ರೋಡ್- ಅಂಡಿಯೂರು ರಸ್ತೆಯಲ್ಲಿ ಬೃಹತ್ ಬಂಡೆಗಳು ಉರುಳಿ ಬಿದ್ದಿದ್ದರಿಂದ ಬರೋಬ್ಬರಿ 20 ತಾಸು ರಸ್ತೆ ಸಂಚಾರ ಸ್ಥಗಿತವಾಗಿದೆ. ಬಳಿಕ, ರಾಮಾಪುರ ಪೊಲೀಸರು ಬಂಡೆಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಯಳಂದೂರು, ಹನೂರು, ಕೊಳ್ಳೇಗಾಲ ತಾಲೂಕು ವ್ಯಾಪ್ತಿಯಲ್ಲಿ ಹತ್ತಾರು ಮನೆಗಳು ಮಳೆಗೆ ಕುಸಿದಿವೆ. ಅದೃಷ್ಟವಶಾತ್ ಎಲ್ಲೂ ಪ್ರಾಣಹಾನಿ ಸಂಭವಿಸಿಲ್ಲ.