ಚಾಮರಾಜನಗರ : ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳ ಗಡಿ ಪ್ರದೇಶ ಕೋಜಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಾಣು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ಕೇರಳದಿಂದ ಬರುವವರ ಮೇಲೆ ಎಚ್ಚರ ವಹಿಸಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಗಡಿಯಲ್ಲಿ ಬೀಡುಬಿಟ್ಟಿದ್ದು, ಕೇರಳದಿಂದ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶ ಮಾಡುವ ವಾಹನಗಳು, ಜನರ ಆರೋಗ್ಯದ ಮೇಲೆ ನಿಗಾ ವಹಿಸುತ್ತಿದ್ದಾರೆ.
ಗುಂಡ್ಲುಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ನೇತೃತ್ವದಲ್ಲಿ, ಕೇರಳದಿಂದ ಬರುವ ವಾಹನಗಳ ಚಾಲಕ, ಸಹಾಯಕ ಮತ್ತು ಸಾರ್ವಜನಿಕರ ಜ್ವರ ತಪಾಸಣೆ ಮಾಡುತ್ತಿದ್ದಾರೆ. ಜ್ವರದಿಂದ ಬಳಲುವವರು ಕಂಡುಬಂದರೆ ಅವರನ್ನು ನಿಗಾದಲ್ಲಿಡುವ ಜೊತೆಗೆ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂರು ಬೆಡ್ಗಳ ವಿಶೇಷ ವಾರ್ಡ್ನಲ್ಲಿ ಚಿಕಿತ್ಸೆ ಒದಗಿಸಲು ತಯಾರಿ ಮಾಡಿಕೊಳ್ಳಲಾಗಿದೆ.
ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ/ಜ್ವರದಿಂದ ಬಳಲುತ್ತಿದ್ದರೆ ಅಂಥವರನ್ನು ಬಸ್ ಮತ್ತು ವಾಹನದಲ್ಲಿ ಕರೆದುಕೊಂಡು ಬರಬಾರದು ಎಂಬ ಎಚ್ಚರಿಕೆಯನ್ನು ಸಾರಿಗೆ ಸಂಸ್ಥೆ ನೌಕರರಿಗೆ, ಇನ್ನಿತರ ವಾಹನದವರಿಗೆ ನೀಡುತ್ತಿದ್ದು, ನಿಫಾ ವೈರಸ್ ಸಂಬಂಧದ ಭಿತ್ತಿಪತ್ರ ಹಂಚಲಾಗುತ್ತಿದೆ. ಶುಕ್ರವಾರದಿಂದ ಗಡಿ ಭಾಗದ ಗ್ರಾಮಗಳಿಗೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಮಾಡುತ್ತಿದ್ದು, ರೋಗ ಲಕ್ಷಣ ಇರುವವರನ್ನು ಪತ್ತೆ ಹಚ್ಚುತ್ತಿದ್ದಾರೆ.
ನಿಫಾ ಜ್ವರ ಎಂದರೇನು: ಇದೊಂದು ವೈರಾಣು ಸೋಂಕು. ನಿಫಾ ಎನ್ಸಫಲೈಟಿಸ್ ಎಂದು ಹೆಸರಿಸಲಾಗಿದೆ. 1998ರಲ್ಲಿ ಮಲೇಷಿಯಾ ಮತ್ತು ಸಿಂಗಾಪುರ ದೇಶಗಳಲ್ಲಿ ಮೊದಲ ಬಾರಿಗೆ ಕಂಡುಬಂದಿತ್ತು. ಮಲೇಷಿಯಾದ ನಿಫಾ ಎಂಬ ಗ್ರಾಮದಲ್ಲಿ ಈ ವೈರಾಣು ಪತ್ತೆ ಹಚ್ಚಿದ್ದರಿಂದ ಇದಕ್ಕೆ ನಿಫಾ ವೈರಾಣು ಎಂದು ಹೆಸರಿಡಲಾಗಿದೆ. ಈ ಜ್ವರವು ಬಾವಲಿ, ಹಂದಿ, ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರಿಗೆ ಬಾಧಿಸುತ್ತದೆ. ಇದು ಮಲೇಷಿಯಾ, ಸಿಂಗಾಪುರ, ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಿಸಿಕೊಂಡಿದೆ.