ಶಾಸಕ ಗಣೇಶ್ ಪ್ರಸಾದ್ ಮಾತನಾಡಿದರು. ಚಾಮರಾಜನಗರ:ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದ ಇಬ್ಬರಿಗೆ ಲಕ್ಷ ರೂಪಾಯಿಗಿಂತಲೂ ಹೆಚ್ಚು ಶುಲ್ಕ ಕೇಳಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಆರ್ಟಿಐ ಅಡಿಯಲ್ಲಿ ಮಾಹಿತಿ ಕೇಳಿರುವವರಿಗೆ ಒಂದು ಲಕ್ಷಕ್ಕಿಂತಲೂ ಅಧಿಕ ಶುಲ್ಕ ಕೇಳಿರುವ ವಿಷಯದ ಕುರಿತು ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅವರು ಪ್ರಸ್ತಾಪಿಸಿ ಗಮನ ಸೆಳೆದರು.
ಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ ನೀಡಿದ ಪತ್ರ ಶಾಸಕ ಗಣೇಶ್ ಪ್ರಸಾದ್ ಹೇಳಿದ್ದೇನು?:''ಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದ ನರೇಗಾ ಕಾಮಗಾರಿ ವಿವರಗಳನ್ನು ನೀಡುವಂತೆ ಕುಂದಕೆರೆ ಗ್ರಾಮದ ಕೆ.ಎನ್. ವಿನೋದ್ ಹಾಗೂ ಕೆ.ಎನ್. ಮಹೇಂದ್ರ ಎಂಬವರು ಮಾಹಿತಿಯನ್ನು ಕೇಳಿದ್ದರು. ಗ್ರಾಮ ಪಂಚಾಯ್ತಿ ಆಡಳಿತವು ಪತ್ರ ಬರೆದಿದ್ದು, ಒಂದು ಫೋಟೋಗೆ 50 ರೂಪಾಯಿ ಹಾಗೂ ಒಂದು ಪುಟ ಜೆರಾಕ್ಸ್ ಕೊಡಲು 2 ರೂಪಾಯಿ ಶುಲ್ಕವಿದೆ ಎಂದು ತಿಳಿಸಿದೆ.
ಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ ನೀಡಿದ ಪತ್ರ ಕೆ.ಎನ್. ಮಹೇಂದ್ರ ಅವರಿಗೆ ಒಟ್ಟು 4,910 ಪುಟ ಮಾಹಿತಿ ಹಾಗೂ 2,385 ಫೋಟೋ ಕೊಡಬೇಕಿದ್ದು, ಅಂಚೆ ವೆಚ್ಚ 540 ಸೇರಿ ಒಟ್ಟು 1,29,610 ರೂಪಾಯಿ ಪಾವತಿಸುವಂತೆ ಪತ್ರದ ಮೂಲಕ ಹೇಳಿದೆ. ಇನ್ನೂ ಕೆ.ಎನ್. ವಿನೋದ್ ಅವರಿಗೆ 10,850 ಪುಟ ಹಾಗೂ 3,600 ಫೋಟೋ ಮಾಹಿತಿ ನೀಡಬೇಕಿದ್ದರೆ, 1,72, 910 ರೂ. ಪಾವತಿಸುವಂತೆ ತಿಳಿಸಲಾಗಿದೆ'' ಎಂದು ಶಾಸಕ ಗಣೇಶ್ ಪ್ರಸಾದ್ ಸಭೆಯಲ್ಲಿ ತಿಳಿಸಿದರು. ಆರ್ಟಿಐ ಅಡಿ ಮಾಹಿತಿ ಕೊಡಬಾರದು ಎಂದು ಇಷ್ಟೊಂದು ಶುಲ್ಕ ವಿಧಿಸಿದ್ದೀರಾ ಎಂದು ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಪ್ರಶ್ನಿಸಿದರು. ಈ ವೇಳೆ ಸಭೆಯು ನಗೆಗಡಲಲ್ಲಿ ತೇಲಿತು. ಶಾಸಕರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಗುಂಡ್ಲುಪೇಟೆ ಇಒ, ಪರಿಶೀಲಿಸಿ ಏನಾಗಿದೆ ಎಂಬುದನ್ನು ತಿಳಿಸಲಾಗುವುದು ಸಭೆಯಲ್ಲಿ ಉತ್ತರಿಸಿದರು.
9 ಸಾವಿರ ಪುಟ ಆರ್ಟಿಐ ದಾಖಲೆ ಚಕ್ಕಡಿಯಲ್ಲಿ ಹೊತ್ತ ತಂದಿದ್ದ ಕಾರ್ಯಕರ್ತ:ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಕೊಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 9 ಸಾವಿರ ಪುಟಗಳ ದಾಖಲೆಗಳನ್ನು ಒದಗಿಸಲಾಗಿತ್ತು. ಈ ದಾಖಲೆಗಳಿಗೆ ಆತ ಪಾವತಿಸಿದ ಶುಲ್ಕ 25 ಸಾವಿರ ರೂ. ಆಗಿತ್ತು. ಆರ್ಟಿಐ ದಾಖಲೆಗಳನ್ನು ಆ ವ್ಯಕ್ತಿ ಚಕ್ಕಡಿಯಲ್ಲಿ ತೆಗೆದುಕೊಂಡು ಹೋಗಿದ್ದರು.
ಮಧ್ಯಪ್ರದೇಶದ ಆರ್ಟಿಐ ಕಾರ್ಯಕರ್ತ ಮಾಖನ್ ಧಾಕಡ್ ಎಂಬುವರು ಪ್ರಧಾನಮಂತ್ರಿ ಆವಾಸ್, ಸಂಬಲ್ ಯೋಜನೆ ಹಾಗೂ ನಿರ್ಮಾಣ ಕಾರ್ಯದಲ್ಲಿ ಪಾವತಿ, ಸ್ವಚ್ಛತಾ ಮಿಷನ್ ಯೋಜನೆ ಅಡಿಯಲ್ಲಿ ನಗರಸಭೆ ಖರೀದಿಸಿದ ವಸ್ತುಗಳ ಕುರಿತು ಮಾಹಿತಿ ಕೇಳಿದ್ದರು. ಆದ್ರೆ, ಆತನಿಗೆ ಮಾಹಿತಿ ನೀಡಲು ಆಗಿರಲಿಲ್ಲ. ಇದಕ್ಕಾಗಿ ಆರ್ಟಿಐ ಕಾರ್ಯಕರ್ತ ಗ್ವಾಲಿಯರ್ನಿಂದ ಭೋಪಾಲದವರೆಗೆ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದರು.
ಕೊನೆಗೆ ಅವರಿಗೆ ಬೇಕಾಗಿದ್ದ ಮಾಹಿತಿ ಸಿಕ್ಕಿತ್ತು. ಆ ಮಾಹಿತಿ ಅವರು 25 ಸಾವಿರ ರೂ. ಶುಲ್ಕ ಕೂಡ ಸರ್ಕಾರಕ್ಕೆ ಪಾವತಿಸಿದ್ದರು. ಅವರ ತಮ್ಮ ಬಳಿ ಅಷ್ಟು ದುಡ್ಡಿಲ್ಲದಿದ್ದರೂ ಎಲ್ಲಿಂದಲೋ ಸಾಲ ಪಡೆದು ಶುಲ್ಕ ಕಟ್ಟಿದ್ದಾರೆ. ಚಕ್ಕಡಿಯಲ್ಲಿ ಆರ್ಟಿಐ ದಾಖಲೆಗಳನ್ನು ಸಾಗಿಸಿದ್ದ. ಕಾರ್ಯಕರ್ತನಿಗೆ ದಾಖಲೆ ಲಭಿಸಿದ್ದ ವೇಳೆ ತುಂಬಾ ಖುಷಿಯಾಗಿದ್ದ. ದಾಖಲೆಗಳನ್ನು ಎಣಿಸಲು ಧಾಕಡ್ ತಮ್ಮೊಂದಿಗೆ ನಾಲ್ವರನ್ನು ಕರೆದುಕೊಂಡು ಬಂದಿದ್ದರು. ಜೊತೆಗೆ ಬಾಜಾ ಬಜಂತ್ರಿಗಳೊಂದಿಗೆ ಚಕ್ಕಡಿಯಲ್ಲಿ ದಾಖಲೆ ಪುಟಗಳನ್ನು ಹಾಕಿಕೊಂಡು ಹೋಗಿದ್ದು, ಈ ಹಿಂದೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ:High Court: ಪ್ರೀತಿಸುವಾಗ ವಿವಾಹ ಆಗುವುದಾಗಿ ಹೇಳಿ ಬಳಿಕ ಮದುವೆಯಾಗದಿದ್ದರೆ ವಂಚನೆ ಆರೋಪದಲ್ಲಿ ಶಿಕ್ಷಿಸಲಾಗದು: ಹೈಕೋರ್ಟ್