ಅಕಾಲಿಕ ಮಳೆಗೆ ಕೈಕೊಟ್ಟ ಈರುಳ್ಳಿ ಬೆಳೆ ಚಾಮರಾಜನಗರ:ಮನೆಯಲ್ಲಿ ಈರುಳ್ಳಿ ಕತ್ತರಿಸುವಾಗ ಕಣ್ಣುರಿಯಿಂದ ನೀರು ಜಿನುತ್ತದೆ. ಕಷ್ಟಪಟ್ಟು ಬೆಳೆದ ರೈತರ ಕಣ್ಣಲ್ಲೂ ಈಗ ಕಣ್ಣೀರು ಚಿಮ್ಮುತ್ತಿದೆ. ಭೂತಾಯಿಯನ್ನು ನಂಬಿ ಬೆಳೆದಿದ್ದ ಈರುಳ್ಳಿ ಕೈ ಸೇರದೇ ಸಂಪೂರ್ಣ ಹಾಳಾಗಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿದರೂ ಯಾವುದೇ ಫಲ ದೊರೆಯದೇ ರೈತರು ಸಂಕಷ್ಟದಲ್ಲಿದ್ದಾರೆ.
ಚಾಮರಾಜನಗರ ತಾಲೂಕಿನ ಕೆ.ಕೆ.ಹುಂಡಿ ಗ್ರಾಮದಲ್ಲಿ ಬೆಳೆದಿದ್ದ ಈರುಳ್ಳಿ (ಸಣ್ಣ ಈರುಳ್ಳಿ) ಬೆಳೆಯನ್ನು ಐದಾರು ಮಂದಿ ರೈತರು ಸ್ವತಃ ತಾವೇ ನಾಶಪಡಿಸಿದರು. ಅಕಾಲಿಕ ಮಳೆಯ ಪರಿಣಾಮ ಈರುಳ್ಳಿ ಸರಿಯಾಗಿ ಬೆಳೆಯದೇ ರೈತರು ಈ ನಿರ್ಧಾರಕ್ಕೆ ಬಂದಿದ್ದಾರೆ. ಸಾಲದ ಹೊರೆಯಿಂದ ಅನ್ನದಾತರ ಪರಿಸ್ಥಿತಿ ಚಿಂತಾಜನಕವಾಗಿದೆ.
ನಿಗದಿತ ಸಮಯಕ್ಕೆ ಬಾರದ ಫಸಲು:ಈರುಳ್ಳಿ ಮಾರಾಟಕ್ಕಾಗಿ ಇಲ್ಲಿನ ರೈತರು ತಮಿಳುನಾಡು ಮಾರುಕಟ್ಟೆಗೆ ಹೋಗಬೇಕು. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡುತ್ತಿತ್ತು. ಆದರೆ, ಮಳೆರಾಯನ ಅಬ್ಬರಕ್ಕೆ ಸಿಲುಕಿದ ಈರುಳ್ಳಿ ರೈತನ ಕೈಸೇರಲಿಲ್ಲ. ಅಲ್ಪಾವಧಿ ಬೆಳೆಯಾಗಿರುವ ಸಣ್ಣ ಈರುಳ್ಳಿ ಸಾಮಾನ್ಯವಾಗಿ 55ರಿಂದ 75 ದಿನಗಳಲ್ಲಿ ಕಟಾವಿಗೆ ಬರಬೇಕಿತ್ತು. ಜಿಲ್ಲೆಯಲ್ಲಿ ಬಹುತೇಕ ರೈತರು ಸಣ್ಣೀರುಳ್ಳಿ ಬೆಳೆಯನ್ನೇ ಬೆಳೆದಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಎಪಿಎಂಸಿಯಿಂದಲೇ ಈರುಳ್ಳಿ ಬೀಜಗಳನ್ನು ತಂದು ಬಿತ್ತನೆ ಮಾಡಿದ್ದರು. ತಿಂಗಳುಗಟ್ಟಲೆ ಬೆಳೆಯನ್ನು ಪೋಷಿಸಿದ್ದರು. ಅಕಾಲಿಕ ಮಳೆಯಿಂದ ಕಾಯಿ ಕಟ್ಟುವ ಮುನ್ನವೇ ಈರುಳ್ಳಿ ಹಾಳಾಗಿದೆ. ಬೆಳೆಗೆ ಹಾಕಿದ್ದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಅಕಾಲಿಕ ಮಳೆಯಿಂದ ತೊಂದರೆ:ಈರುಳ್ಳಿ ಬೆಳೆದಕೆ.ಕೆ.ಹುಂಡಿಯ ಪ್ರತಿ ರೈತನೂ 2ರಿಂದ 5 ಲಕ್ಷ ರೂಪಾಯಿವರೆಗೆ ಖರ್ಚು ಮಾಡಿದ್ದಾನೆ. ಆದರೆ ಸುರಿದ ಅಕಾಲಿಕ ಮಳೆ ರೈತನ ಕನಸು ಕಮರಿಸಿದೆ. ಬೆಳೆಗೆ ಸುರಿದ ಬಂಡವಾಳವೆಲ್ಲಾ ನೀರಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದಾಗ ಸರಿಯಾದ ಫಸಲು ಬರುವುದಿಲ್ಲ. ಪ್ರತಿವರ್ಷವೂ ಒಂದಿಲ್ಲೊಂದು ಸಮಸ್ಯೆ ರೈತರನ್ನು ಹೈರಾಣಾಗಿಸುತ್ತಿದೆ. ಹಾಗಾಗಿ, ಯಾವುದೇ ಫಲ ನೀಡದ ಬೆಳೆಯನ್ನು ರೈತರು ಟ್ರ್ಯಾಕ್ಟರ್ನಿಂದ ನಾಶಪಡಿಸುತ್ತಿದ್ದಾರೆ. ಇನ್ನೊಂದೆಡೆ, ಬೆಳೆಗೆ ಹಾಕಿದ್ದ ಬಂಡವಾಳ ವಾಪಸ್ ಬಾರದ ಕಾರಣಕ್ಕೆ ರೈತರು ಸಾಲದ ಕೂಪಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಕೆಲವು ರೈತರು ಊರು ಬಿಟ್ಟು ಪಟ್ಟಣ ಸೇರಿದ್ದಾರೆ. ಬದುಕಿನ ಬಂಡಿ ಸಾಗಿಸಲು ಬೇರೆ ನೌಕರಿ ಹುಡುಕುತ್ತಿದ್ದಾರೆ.
ಎಕರೆಗಟ್ಟಲೆ ವ್ಯಾಪ್ತಿಯಲ್ಲಿ ಬೆಳೆ ನಾಶ:ಕಷ್ಟಪಟ್ಟು ದುಡಿದು, ಪ್ರಾಣಿಗಳಿಂದ ರಕ್ಷಿಸಿದ್ದ ಬೆಳೆ ಕೈಗೆ ಸಿಗದೇ ಇರುವುದರಿಂದ ಹತಾಶರಾಗಿ ರೈತರಿಗ ಬೆಳೆ ನಾಶಪಡಿಸಿದ್ದಾರೆ. ಮೂರು ಎಕರೆಯಲ್ಲಿ ಈರುಳ್ಳಿ ಹಾಕಿದ್ದ ರೈತ ನಾಗರಾಜು ಅವರಿಗೆ ಸತತ ಐದು ಬೆಳೆಗಳೂ ಕೈಕೊಟ್ಟಿವೆ. ಬೇಸಾಯ ಮಾಡುವುದೇ ದುಸ್ತರವಾಗಿದೆ ಎಂದು ಅವರು ಅಳಲು ತೋಡಿಕೊಂಡರು. "ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದೇನೆ. ಆದರೆ ಬೆಳೆಯೇ ಬರಲಿಲ್ಲ. ಸಾಲ ಕೊಟ್ಟವರು ಮನೆ ಬಾಗಿಲು ತಟ್ಟುತ್ತಿದ್ದಾರೆ. ಸರ್ಕಾರ ನಮ್ಮ ನೆರವಿಗೆ ಬರಬೇಕು" ಎಂದು ಮನವಿ ಮಾಡಿದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ ಪ್ರತಿ ಕೆಜಿಗೆ 35ರಿಂದ 40 ರೂ. ಇದೆ. ಆದರೆ, ರೈತರು ಹಾಕಿದ ಬೆಳೆ ಸಂಪೂರ್ಣ ಹಾಳಾಗಿದೆ. ಉತ್ತಮ ಬೆಲೆ ಇದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಅನ್ನದಾತರದ್ದು. ತೋಟಗಾರಿಕೆ ಹಾಗೂ ಕೃಷಿ ಇಲಾಖೆ ನೆರವಿಗೆ ಬರಬೇಕೆಂಬ ನಿರೀಕ್ಷೆ ಬೆಳೆಗಾರರದ್ದು.
ಇದನ್ನೂ ಓದಿ:ಚಾಮರಾಜನಗರದಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ- ವಿಡಿಯೋ