ಚಾಮರಾಜನಗರ: ಹದಿಹರೆಯದ ಹೆಣ್ಣುಮಕ್ಕಳ ಸ್ವಚ್ಛ ಹಾಗೂ ಸುರಕ್ಷಿತ ಋತುಚಕ್ರ ನಿರ್ವಹಣೆಗಾಗಿ ಸರ್ಕಾರ ಘೋಷಿಸಿದ್ದ ಮೈತ್ರಿ ಮುಟ್ಟಿನ ಕಪ್ (Menstrual cup) ಯೋಜನೆಯು ಚಾಮರಾಜನಗರ ಜಿಲ್ಲೆಯಿಂದ ಜಾರಿಗೆ ಬರುತ್ತಿದೆ. ಕಳೆದ ಬಜೆಟ್ನಲ್ಲಿ ಚಾಮರಾಜನಗರ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದರು.
1. ಶುಚಿ ಕಾರ್ಯಕ್ರಮ: ಸರ್ಕಾರದ ಶುಚಿ ಕಾರ್ಯಕ್ರಮದ ಯೋಜನೆಯಡಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಈ ಯೋಜನೆಯು ರಾಜ್ಯಾದ್ಯಂತ ಸುಮಾರು 19 ಲಕ್ಷ ವಿದ್ಯಾರ್ಥಿನಿಯರನ್ನು ಒಳಗೊಂಡಿದೆ. ಪ್ರತಿವರ್ಷ ಸರಾಸರಿ 2.23 ಕೋಟಿ ಯೂನಿಟ್ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ವಿತರಿಸಲಾಗುತ್ತಿದೆ. ಯೋಜನೆಯ ಮುಂದುವರೆದ ಹೆಜ್ಜೆಯಾಗಿ ಪರಿಸರಸ್ನೇಹಿ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳನ್ನು ಕೊಡುವ ಉದ್ದೇಶದಿಂದ ಮರುಬಳಕೆ ಮಾಡಬಹುದಾದ ಮುಟ್ಟಿನ ಕಪ್ಗಳನ್ನು ಪರಿಚಯಿಸಲಾಗುತ್ತಿದೆ.
2. ಮೊದಲ ರಾಜ್ಯ: ಮೈತ್ರಿ ಮುಟ್ಟಿನ ಕಪ್ ಯೋಜನೆಯು ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಫಲಿತಾಂಶದ ಆಧಾರದ ಮೇಲೆ ಕಾರ್ಯಕ್ರಮವನ್ನು ರಾಜ್ಯದ ಇತರೆ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತದೆ. ಕರ್ನಾಟಕವು ಮುಟ್ಟಿನ ನೈರ್ಮಲ್ಯ ನಿರ್ವಹಣೆ ಯೋಜನೆಯಡಿಯಲ್ಲಿ ಮುಟ್ಟಿನ ಕಪ್ ಪರಿಚಯಿಸುವ ಮೊದಲ ರಾಜ್ಯವಾಗಿದೆ. ಈ ಯೋಜನೆಯು 10 ಸಾವಿರ ಫಲಾನುಭವಿಗಳನ್ನು ಒಳಗೊಂಡಿದೆ.
3. ಪರಿಸರ ಸ್ನೇಹಿ ಯೋಜನೆ:ಮೈತ್ರಿ ಮುಟ್ಟಿನ ಕಪ್ ಹದಿಹರೆಯದವರಲ್ಲಿ ಋತುಚಕ್ರದ ಸ್ವಚ್ಛ, ನೈರ್ಮಲ್ಯ ಮತ್ತು ಪರಿಸರಸ್ನೇಹಿ ನಿರ್ವಹಣೆಯನ್ನು ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಹೊಸ ಹೆಜ್ಜೆಯಾಗಿದೆ. ಮೆಡಿಕಲ್ ಗ್ರೇಡ್ ಸಿಲಿಕಾನ್‍ನಿಂದ ಮಾಡಲಾಗಿದ್ದು, ಸುರಕ್ಷಿತವಾಗಿದೆ. ಮುಟ್ಟಿನ ಸಮಯದಲ್ಲಿನ ನೈರ್ಮಲ್ಯ ಕಾಪಾಡಲು ವೈದ್ಯಕೀಯವಾಗಿ ಬಳಸಬಹುದಾದಂತಹ ಹಾಗೂ ಸ್ಯಾನಿಟರಿ ಪ್ಯಾಡ್‍ಗಳ ಪರ್ಯಾಯ ಸಾಧನವಾಗಿದೆ.