ಚಾಮರಾಜನಗರ: ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ತಂದೆ-ತಾಯಿಯನ್ನು ಕಳೆದ 1 ತಿಂಗಳಿನಿಂದ ಕಾಣದೇ ಮರುಗುತ್ತಿದ್ದಾಳೆ ಈ ಬಾಲಕಿ.
ಜಿಲ್ಲಾಸ್ಪತ್ರೆಯ ಸ್ಟಾಫ್ ನರ್ಸ್ ಆಗಿರುವ ಗೀತಾ ಎಂಬವರು ಆಸ್ಪತ್ರೆಯ ಸಿಸಿಯು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಕೆ ನಾಲ್ಕು ದಿನದ ಹಿಂದೆ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗೀತಾ ಅವರ ಪತಿ ವೀರಭದ್ರಸ್ವಾಮಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು , ಮುನ್ನೆಚ್ಚರಿಕೆಯಿಂದ ಮಗಳನ್ನು ಅಜ್ಜಿ ಮನೆಯಲ್ಲಿರಿಸಿದ್ದಾರೆ. ಆದರೆ, ಅಜ್ಜಿ ಮನೆಯಲ್ಲಿರುವ 8 ವರ್ಷದ ಕೃಷಿಕಾ ಕಳೆದ 1 ತಿಂಗಳಿನಿಂದ ಅಪ್ಪ- ಅಮ್ಮನನ್ನು ಕಾಣದೇ ದಿನವೂ ಫೋನ್ ಮಾಡಿ ಕಣ್ಣೀರಿಡುತ್ತಿದ್ದಾಳೆ.
ಮಗಳನ್ನು ಇಲ್ಲಿಗೆ ಕರೆತರಬಹುದು. ಆದರೆ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹಾಗಾಗಿ, ಪತ್ನಿ ಈಗ ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮಗೆ ನಾವು ಮಾಡುತ್ತಿರುವ ಕೆಲಸದಲ್ಲಿ ಹೆಮ್ಮೆ ಇದೆ. ನಾವು ಕುಟುಂಬದಿಂದ ದೂರವಿದ್ದು ದುಡಿಯುತ್ತಿರುವುದನ್ನು ಜನರು ಅರಿತುಕೊಂಡು ಮಾಸ್ಕ್ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜವಾಬ್ದಾರಿ ಪ್ರದರ್ಶಿಸಬೇಕೆಂದು ಪತಿ ವೀರಭದ್ರಸ್ವಾಮಿ ಹೇಳುತ್ತಾರೆ.
ಗೀತಾ ಅವರು ಕೋವಿಡ್ ಆಸ್ಪತ್ರೆಯ ಸಿಸಿಯು ವಾರ್ಡಿನಲ್ಲಿ 7 ತಾಸು ಪಿಪಿಇ ಕಿಟ್ ಧರಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಪಿಪಿಇ ಕಿಟ್ ಧರಿಸಿದ ಬಳಿಕ ನೀರು, ಆಹಾರ ಏನನ್ನೂ ಸೇವಿಸಲಾಗದ ಸ್ಥಿತಿಯಿದೆ. ಇದು ನಿಜಕ್ಕೂ ಯೋಧರಂತೆ ಕಾರ್ಯ ನಿರ್ವಹಿಸುವ ಪರಿಸ್ಥಿತಿ.
ಈ ದಂಪತಿಗಳ ಸೇವೆ ಅರಿತಿರುವ ನೆರೆಹೊರೆಯವರು ಗೀತಾ ಕರ್ತವ್ಯದಿಂದ ಹಿಂತಿರುಗಿದ ಬಳಿಕ ಪುಷ್ಪವೃಷ್ಟಿ ಮೂಲಕ ಅವರನ್ನು ಬರಮಾಡಿಕೊಳ್ಳಬೇಕೆಂದು ಯೋಜನೆ ರೂಪಿಸಿಕೊಂಡಿದ್ದಾರೆ.