ಚಾಮರಾಜನಗರ: ಚಿರತೆಯೊಂದು ತೋಟದ ಮನೆಗಳ ಸಮೀಪವೇ ಎರಡು ಮರಿಗಳನ್ನು ಹಾಕಿರುವ ಘಟನೆ ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಡುವ ಚಾಮರಾಜನಗರ ತಾಲೂಕಿನ ಕಟ್ನವಾಡಿ ಗ್ರಾಮದಲ್ಲಿ ನಡೆದಿದೆ.
ಕಟ್ನವಾಡಿ ಗ್ರಾಮದ ಗುರು ಎಂಬವರು ಕಬ್ಬಿನ ಫಸಲನ್ನು ಕಟಾವು ಮಾಡುವಾಗ 15-20 ದಿನಗಳ ಅವಧಿಯ ಎರಡು ಚಿರತೆ ಮರಿಗಳು ಪತ್ತೆಯಾಗಿದೆ. ವಿಚಾರ ತಿಳಿದ ಚಾಮರಾಜನಗರ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಮರಿಗಳನ್ನು ಜಮೀನಿನಲ್ಲೇ ಬಿಟ್ಟು ಕಟ್ಟೆಚ್ಚರ ವಹಿಸಿದ್ದಾರೆ.
ಚಿರತೆ ಮರಿ ಹಾಕಿರುವ ಸ್ಥಳದಿಂದ 70-100 ಮೀಟರ್ ಅಂತರದಲ್ಲೇ ತೋಟದ ಮನೆಗಳು, ಜನರು ಓಡಾಡುವ ಪ್ರದೇಶದಲ್ಲಿ ಚಿರತೆ ಬಂದಿರುವುದು ಗಮನಕ್ಕೆ ಬಂದಿಲ್ಲ. ಚಿರತೆ ಜನರಿಗೆ ಕಾಣದಿರುವುದು ಪವಾಡವೇ ಆಗಿದೆ. ತಾಯಿ ಚಿರತೆ ಮರಿಗಳನ್ನು ಕರೆದೊಯ್ಯಲಿದೆ ಎಂದು ಅರಣ್ಯ ಇಲಾಖೆಯು ಕ್ಯಾಮರಾಗಳನ್ನು ಅಳವಡಿಸಿ ನಿಗಾ ಇಟ್ಟಿದೆ.
ಮರಿಗಳು ಪತ್ತೆಯಾದ ಬಳಿಕ ರೈತರು ಮರಿಗಳೊಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದು, ಚಿತ್ರಗಳು ಸಖತ್ ವೈರಲ್ ಆಗುತ್ತಿವೆ.
ಇದನ್ನೂ ಓದಿ:ಮೈಸೂರು: ಸೆರೆ ಹಿಡಿದ ಚಿರತೆ ತೋರಿಸುವಂತೆ ಗ್ರಾಮಸ್ಥರ ಪಟ್ಟು