ಕರ್ನಾಟಕ

karnataka

ಕೊರೊನಾ ಮಣಿಸಲು ಚಾಮರಾಜನಗರ ಡಿಸಿಯ ಪಂಚಸೂತ್ರಗಳು

By

Published : Jul 18, 2020, 4:11 PM IST

ಕೋವಿಡ್​ ಸೋಂಕಿನಿಂದ ರಕ್ಷಣೆ ಪಡೆಯಲು ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ. ಆರ್​. ರವಿಯವರು ಪಂಚಸೂತ್ರಗಳನ್ನು ಜನರಿಗೆ ತಿಳಿಸಿದ್ದು, ಪಾಲಿಸುವಂತೆ ಹೇಳಿದ್ದಾರೆ.

chamarajangar-dc-corona-precautions
ಚಾಮರಾಜನಗರ ಡಿಸಿ

ಚಾಮರಾಜನಗರ:ಜಿಲ್ಲೆಯನ್ನು ಬಾಧಿಸುತ್ತಿರುವ ಕೊರೊನಾ ಮಹಾಮಾರಿಯನ್ನು ಮಣಿಸಲು, ಅನುಭವದ ಮೂಸೆಯಿಂದ ಚಾಮರಾಜನಗರ ಡಿಸಿ ಡಾ. ಎಂ. ಆರ್. ರವಿ ಪಂಚಸೂತ್ರಗಳನ್ನು ತಿಳಿಸಿದ್ದು, ಇವನ್ನು ಜನರು ಪಾಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಇಂದು ಫೇಸ್​​ಬುಕ್​​ ಲೈವ್​ನಲ್ಲಿ ಮಾತನಾಡಿದ ಅವರು, ಸ್ವಯಂ ಜಾಗೃತಿ, ಸ್ವಯಂ ವರದಿ, ಸ್ವಯಂ ಪರೀಕ್ಷೆ, ಸ್ವಯಂ ಪ್ರತ್ಯೇಕತೆ ಹಾಗೂ ಸ್ವಯಂ ದಿಗ್ಬಂಧನ ಎಂಬ ಪಂಚಸೂತ್ರಗಳನ್ನು ತಿಳಿಸಿ ಕೊರೊನಾ ವಿರುದ್ಧ ಸೆಣಸಲು ಈ ಪಂಚಸೂತ್ರಗಳನ್ನು ಪಾಲಿಸಬೇಕು ಎಂದರು‌.

ಕೊರೊನಾ ಮಣಿಸಲು ಚಾಮರಾಜನಗರ ಡಿಸಿಯ ಪಂಚಸೂತ್ರಗಳು
  1. ಸ್ವಯಂ ಜಾಗೃತಿ- ನೆಗಡಿ, ಜ್ವರದ ಬಗ್ಗೆ ಸ್ವಯಂ ಜಾಗೃತರಾಗಿರಬೇಕು. ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು.
  2. ಸ್ವಯಂ ವರದಿ- ಜ್ವರ, ಕೆಮ್ಮು ಬಂದ ವೇಳೆ ಹತ್ತಿರದ ಆಸ್ಪತ್ರೆಗೆ ಸ್ವಯಂ ತಪಾಸಣೆಗೆ ಒಳಗಾಗಬೇಕು, ಅಗತ್ಯಬಿದ್ದರೆ ಗಂಟಲು ದ್ರವ ನೀಡಬೇಕು.
  3. ಸ್ವಯಂ ಪರೀಕ್ಷೆ- ಆರೋಗ್ಯದಲ್ಲಿ ಏರುಪೇರಾದಾಗ, ವಯಸ್ಸಾದವರು ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಒಳಗಾಗಬೇಕು.
  4. ಸ್ವಯಂ ಪ್ರತ್ಯೇಕತೆ - ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರು ಸ್ವಯಂ ಪ್ರತ್ಯೇಕವಾಗಿರಲು ಆದ್ಯತೆ ನೀಡಬೇಕು. ಹೆಚ್ಚು ಯಾರೊಂದಿಗೂ ಬೆರೆಯದೇ ಇರಬೇಕು.
  5. ಸ್ವಯಂ ದಿಗ್ಬಂಧನ- ಸ್ವಯಂ ಪ್ರೇರಣೆಯಿಂದ ನಿರ್ಬಂಧ ಹಾಕಿಕೊಳ್ಳುವುದು ಹೆಚ್ಚು ಈಗ ತುರ್ತಾಗಿದ್ದು, ಅನಗತ್ಯವಾಗಿ ಅಡ್ಡಾಡುವುದು, ಹರಟೆ ಹೊಡೆಯುವುದು, ಸುತ್ತಾಡುವುದನ್ನು ಮಾಡದೇ ಕ್ವಾರಂಟೈನ್​ ವಿಧಿಸಿಕೊಂಡು ಆದಷ್ಟು ಮನೆಯಲ್ಲೇ ಇರಬೇಕು ಎಂಬ ಈ ಪಂಚಸೂತ್ರಗಳನ್ನು ಜನರು ಪಾಲಿಸಬೇಕು ಎಂದು ಹೇಳಿದ್ದಾರೆ.

ಉಳಿದಂತೆ, ಇನ್ನು 3-4 ದಿನಗಳಲ್ಲಿ ಹೋಮ್​​ ಐಸೋಲೇಷನ್​ನಲ್ಲಿ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಪ್ರಾರಂಭಿಸಲಿರುವುದಾಗಿ ಅವರು ತಿಳಿಸಿದ್ದು, ಮನೆಯಲ್ಲಿ ಉತ್ತಮ ಸೌಕರ್ಯ ಇರುವವರಿಗೆ ಜಿಲ್ಲಾಡಳಿತ ಸಹಕಾರ ನೀಡಲಿದೆ. ಟೆಲಿ ಮಾನಿಟರ್ ವ್ಯವಸ್ಥೆ ಮೂಲಕ ತಜ್ಞ ವೈದ್ಯರು ಇವರಿಗೆ ಸೂಚನೆಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.

24 ಮಂದಿ ಕೊರೊನಾ ವಾರಿಯರ್​ಗೆ ಸೋಂಕು

ಜಿಲ್ಲೆಯಲ್ಲಿ ಪತ್ತೆಯಾದ 234 ಪ್ರಕರಣಗಳ ಪೈಕಿ 192 ಜನ ಯಾವುದೇ ರೋಗ ಲಕ್ಷಣಗಳಿಲ್ಲದವರಾಗಿದ್ದಾರೆ. 24 ಮಂದಿ ಕೊರೊನಾ ಯೋಧರಿಗೂ ಜಿಲ್ಲೆಯಲ್ಲಿ ಸೋಂಕು ತಗುಲಿದ್ದು ಸೋಮವಾರದಿಂದ ಇವರಿಗೆ ಪ್ರತ್ಯೇಕವಾಗಿ ಆರೈಕೆ ಮಾಡಲು ತೀರ್ಮಾನಿಸಲಾಗಿದೆ. ಕೊರೊನಾ ಯೋಧರಿಗಾಗಿಯೇ 50 ಹಾಸಿಗೆಗಳ ಎರಡು ಕೊಠಡಿಗಳನ್ನು ಮೀಸಲಿಡುವುದಾಗಿ ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರಲ್ಲಿ 103 ಮಂದಿ ಬೆಂಗಳೂರಿನಿಂದ ವೈರಸ್ ಹೊತ್ತು ತಂದಿದ್ದು ಮೈಸೂರು, ತಮಿಳುನಾಡಿನಿಂದ ಬಂದ 33 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರತಿ 8-9 ದಿನಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದ್ದು ಮುಂದಿನ 8-10 ದಿನಗಳಲ್ಲಿ ಸಂಖ್ಯೆ 500 ದಾಟಲಿದೆ. ಆದರೆ, ಜಿಲ್ಲೆಯ ಜನತೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಜಿಲ್ಲೆಯಲ್ಲಿ ಗುಣಮುಖರಾಗಿ ತೆರಳುತ್ತಿರುವವರ ಸಂಖ್ಯೆ ಶೇ.80 ರಷ್ಟಿದೆ ಎಂದು ಅವರು ವಿವರಿಸಿದರು.

ABOUT THE AUTHOR

...view details