ಚಾಮರಾಜನಗರ:ನಗರಸಭೆಯಲ್ಲಿ ಕಳೆದ 8 ತಿಂಗಳಿಂದ ಕಡತಗಳು ವಿಲೇವಾರಿ ಆಗದಿರುವ ಬಗ್ಗೆ ವ್ಯಾಪಕ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ಕೆ.ಸುರೇಶ್ ಬುಧವಾರ ದಿಢೀರ್ ಭೇಟಿ ನೀಡಿ, ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಛೀಮಾರಿ ಹಾಕಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಮೌಖಿಕ ನಿರ್ದೇಶನದ ಮೇರೆಗೆ ನಗರಸಭೆಗೆ ಭೇಟಿ ನೀಡಿದ ಸುರೇಶ್ ಅವರು, ಬಾಕಿ ಉಳಿದ ಕಡತಗಳನ್ನು ಪರಿಶೀಲಿಸಿದರು. ಈ ವೇಳೆ ಯಾವುದೇ ಕಾರಣಗಳಿಲ್ಲದೇ ಭಾರೀ ಪ್ರಮಾಣದಲ್ಲಿ ಕಡತ ವಿಲೇವಾರಿ ಮಾಡದೇ ಇರುವುದು ಕಂಡುಬಂದಿದೆ. ಇಷ್ಟು ಕಡತಗಳನ್ನು ಬಾಕಿ ಉಳಿಸಿಕೊಂಡ ಕಚೇರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಕಡತ ವಿಲೇವಾರಿ ಆಗದೇ ಇರಲು ಕಾರಣವೇನು ಮತ್ತು ಕಾರ್ಯನಿರ್ವಹಿಸದ ಸಿಬ್ಬಂದಿ ಮೇಲೆ ಸಕಾಲ ಕಾಯ್ದೆಯಡಿ ಶಿಸ್ತು ಕ್ರಮ ಜರುಗಿಸಲು ಶಿಫಾರಸು ಮಾಡಲಾಗುವುದು. 30 ದಿನದೊಳಗೆ ಆಗಬೇಕಾದ ಕೆಲಸ 300 ದಿನವಾದರೂ ಆಗದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಡತ ವಿಲೇವಾರಿ ಆಗದ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ. ಕಾವೇರಿ ಅವರಿಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಸಿಬ್ಬಂದಿಯ ಕರ್ತವ್ಯಲೋಪದ ಬಗ್ಗೆ ಇನ್ನೆರಡು ದಿನದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸುರೇಶ್ ತಿಳಿಸಿದರು.
ಕಡತ ಪರಿಶೀಲನೆ ವೇಳೆ ಸಾವರ್ಜನಿಕರು ನಗರಸಭೆ ಸಿಬ್ಬಂದಿ ವಿರುದ್ಧ ದೂರುಗಳ ಸುರಿಮಳೆಗೈದರು.