ಚಾಮರಾಜನಗರ: ಲೋಕ ಸಮರದ ಕಾವು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲೂ ಪರ- ವಿರೋಧದ ಸಂಭಾಷಣೆಗಳು ವೈರಲಾಗುತ್ತಿದೆ.
ಚಾಮರಾಜನಗರ ಬಿಜೆಪಿ ಅಭ್ಯರ್ಥಿಯಾಗಿ ವಿ. ಶ್ರೀನಿವಾಸಪ್ರಸಾದ್ ಬಹುತೇಕ ಖಚಿತವಾಗುತ್ತಿದ್ದಂತೆ ವಾಟ್ಸಾಪ್, ಫೇಸ್ಬುಕ್ನಲ್ಲಿ ನೆಟ್ಟಿಗರು ತಮ್ಮ-ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿ. ಶ್ರೀನಿವಾಸ್ ಪ್ರಸಾದ್-ಅರ್ಜುನ, ಆರ್. ಧ್ರುವನಾರಾಯಣ-ಕರ್ಣ, ನರೇಂದ್ರ ಮೋದಿ-ಕೃಷ್ಣ ಎಂದು ವಿಶ್ಲೇಷಿಸಿ ಹರಿಬಿಟ್ಟಿರುವ ಸಂದೇಶವೊಂದು ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ವಿ. ಶ್ರೀನಿವಾಸಪ್ರಸಾದ್ ಅರ್ಜುನ, ಆರ್. ಧ್ರುವನಾರಾಯಣ ಕರ್ಣನಿದ್ದಂತೆ. ಅರ್ಜುನನಿಗಿಂತ ಕರ್ಣ ಅಪ್ರತಿಮ ವೀರನಾದರೂ, ಅವರು ಮುನ್ನಡೆಸುವ ಪಕ್ಷಗಳನ್ನು ಗಮನಿಸಬೇಕು. ಅರ್ಜುನನ ಹಿಂದೆ ಮೋದಿಯಂತ ಶ್ರಿಕೃಷ್ಣ ಇದ್ದರೆ, ಕರ್ಣ ಇರುವುದು ದುರ್ಯೋದನ, ದುಶ್ಯಾಸನ, ಶಕುನಿ ಇರುವ ಮಹಾಘಟಬಂಧನ್ ಪಕ್ಷದಲ್ಲಿ ಎಂದು ಬಿಜೆಪಿಯೇತರ ಪಕ್ಷಗಳನ್ನು ತೆಗಳಿದ ಚಾಮರಾಜನಗರ ಕುರುಕ್ಷೇತ್ರದ ಸಂದೇಶ ಸಾಕಷ್ಟು ಸದ್ದು ಮಾಡುತ್ತಿದೆ.
ಸಂಸದ ಧ್ರುವನಾರಾಯಣ ಕೆಲಸಗಳನ್ನು ಹೊಗಳಿ, ಶ್ರೀಕೃಷ್ಣನಂತೆ ಮೋದಿ ಬಿಜೆಪಿಯನ್ನು ಮುನ್ನಡೆಸುತ್ತಿದ್ದು, ಗೆಲುವು ಪಾಂಡವರಿಗೆ ಹೊರತು ಕೌರವರಿಗಲ್ಲ ಎಂಬಂತೆ ವ್ಯಾಖ್ಯಾನಿಸಿದ್ದಾರೆ.