ಚಾಮರಾಜನಗರ: ಮೂರು ಕೃಷಿ (ತಿದ್ದುಪಡಿ) ಕಾಯ್ದೆಗಳನ್ನು ವಾಪಸ್ ಪಡೆಯುವ ನಿರ್ಧಾರವನ್ನು ಪಿಎಂ ಮೋದಿ ಘೋಷಿಸಿದ ಬೆನ್ನಲ್ಲೇ, ನಗರದಲ್ಲಿ ರೈತರು ವಿಜಯದ ಮೆರವಣಿಗೆ ನಡೆಸಿ, ರಾಷ್ಟೀಯ ಹೆದ್ದಾರಿಯಲ್ಲಿ ತಮಟೆ ಬಾರಿಸಿ ಕುಣಿದು ಸಂಭ್ರಮಾಚರಣೆ ಮಾಡಿದರು.
ನಗರದ ಚಾಮರಾಜೇಶ್ವರ ದೇವಾಲಯ ಮುಂಭಾಗದಿಂದ ವಿಜಯೋತ್ಸವದ ಮೆರವಣಿಗೆ ಹೊರಟ ಹತ್ತಾರು ಮಂದಿ ರೈತರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ತಮಟೆ ಬಾರಿಸುತ್ತಾ ಜಯಘೋಷಣೆ ಕೂಗಿ ಕುಣಿದು ಕುಪ್ಪಳಿಸಿದರು. ರೈತರ ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರರು ಸೇರಿಕೊಂಡು ಸಿಹಿ ಹಂಚಿ ರೈತ ಪರ ಘೋಷಣೆಗಳನ್ನು ಕೂಗಿ ವಿಜಯೋತ್ಸವ ಆಚರಿಸಿದ್ದಾರೆ.
26ಕ್ಕೆ ಹೆದ್ದಾರಿ ಬಂದ್:
ರೈತ ಸಂಘದ ಜಿಲ್ಲಾ ಮುಖಂಡ ಡಾ.ಗುರುಪ್ರಸಾದ್ ಮಾತನಾಡಿ, ಸಂಸತ್ತಿನಲ್ಲಿ ಕೃಷಿ ಕಾಯ್ದೆಗಳು ರದ್ದಾಗುವ ತನಕ ಚಳವಳಿ ನಿಲ್ಲಿಸುವುದಿಲ್ಲ. ಮೋದಿ ಅವರು ರೈತರಲ್ಲಿ ಕ್ಷಮೆ ಕೋರಬೇಕು. ಇದೇ 26ರಂದು ಸಂಯುಕ್ತ ಹೋರಾಟ ಕರ್ನಾಟಕದಡಿಯಲ್ಲಿ 42 ಸಂಘಟನೆಗಳು ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ರಾಜ್ಯಾದ್ಯಂತ 15 ಕಡೆಗಳಲ್ಲಿ ಹೆದ್ದಾರಿ ತಡೆಯುವ ಪ್ರತಿಭಟನೆ ನಡೆಸಲಿದ್ದೇವೆ. ಅದರಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡುವುದಿಲ್ಲ. ಅಂದು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.