ಚಾಮರಾಜನಗರ:ಬೆಳೆ ಸಮೀಕ್ಷೆಯಲ್ಲಿ ತೀರಾ ಹಿಂದುಳಿದಿದ್ದ ಚಾಮರಾಜನಗರ ಜಿಲ್ಲೆ ಇದೀಗ ದಿಢೀರ್ನೇ ಪಿಆರ್ ಸರ್ವೇಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಒಟ್ಟಾರೆ ಬೆಳೆ ಸಮೀಕ್ಷೆಯಲ್ಲಿ 15ನೇ ಸ್ಥಾನಕ್ಕೆ ಜಿಗಿದಿದೆ.
ಬೆಳೆ ಸಮೀಕ್ಷೆಯಲ್ಲಿ ನಂಬರ್ 1 ಸ್ಥಾನಕ್ಕೇರಿದ ಚಾಮರಾಜನಗರ ಜಿಲ್ಲೆ ರೈತರೆ ಸರ್ವೇ ಕಾರ್ಯ ಮಾಡಬೇಕಾದ ದಿನಗಳಲ್ಲಿ ಜಿಲ್ಲೆಯು 26ನೇ ಸ್ಥಾನದಲ್ಲಿತ್ತು. ಬಳಿಕ ಕೃಷಿ ಇಲಾಖೆಯು ಖಾಸಗಿ ನಿವಾಸಿಗಳು ಮತ್ತು ಕಂದಾಯ ಇಲಾಖೆ ಸಿಬ್ಬಂದಿಗೆ ಟಾರ್ಗೆಟ್ ನೀಡಿದ ಬಳಿಕ ದಿನವೊಂದಕ್ಕೆ ಸರಾಸರಿ 20-25 ಸಾವಿರ ಜಮೀನುಗಳ ಸರ್ವೇಯನ್ನು ಮುಗಿಸುತ್ತಿದ್ದಾರೆ. ಎರಡ್ಮೂರು ದಿನಗಳಲ್ಲಿ ಸಂಪೂರ್ಣ ಸಮೀಕ್ಷೆಯೇ ಮುಗಿಯುವ ವಿಶ್ವಾಸವೂ ವ್ಯಕ್ತವಾಗಿದೆ.
ಈ ಕುರಿತುಈಟಿವಿ ಭಾರತದೊಂದಿಗೆ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್.ಟಿ.ಚಂದ್ರಕಲಾ, ರೈತರ ಪರವಾಗಿ ಖಾಸಗಿ ನಿವಾಸಿಗಳು ಮಾಡುವ ಸರ್ವೇಯಲ್ಲಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದ್ದು, ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. 4.30 ಲಕ್ಷ ಜಮೀನುಗಳಲ್ಲಿ 97,910 ಪ್ಲಾಟ್ಗಳ ಸರ್ವೇಯನ್ನು ರೈತರೇ ಮಾಡಿದ್ದಾರೆ. ರೈತರ ಹೆಸರಲ್ಲಿ ಖಾಸಗಿ ನಿವಾಸಿಗಳು ಶೇ. 39ರಷ್ಟು ಸರ್ವೇ ಮುಗಿಸಿದ್ದಾರೆ. ಇನ್ನು, 2 ಲಕ್ಷ ಜಮೀನುಗಳ ಸರ್ವೇ ಕಾರ್ಯ ನಡೆಯಬೇಕಿದ್ದು, ಬಹಳ ವೇಗವಾಗಿ ಮುಗಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಒಂದು ವಾರದ ಹಿಂದೆ ಚಾಮರಾಜನಗರ 26ನೇ ಸ್ಥಾನದಲ್ಲಿತ್ತು. ಈಗ 15ನೇ ಸ್ಥಾನಕ್ಕೇರಿದೆ. ಪಿಆರ್ ಆ್ಯಪ್ ಮೂಲಕ ಸರ್ವೇ ಮಾಡಿರುವುದರಲ್ಲಿ ನಾವೇ ಮೊದಲ ಸ್ಥಾನದಲ್ಲಿದ್ದೇವೆ. ಬೆಳೆ ದರ್ಶಕ ಎಂದು ಮತ್ತೊಂದು ಆ್ಯಪ್ನ್ನು ಬಿಡುಗಡೆ ಮಾಡಿದ್ದು, ಸಮೀಕ್ಷೆಯಲ್ಲಿ ಏನಾದರೂ ಲೋಪದೋಷ ಕಂಡುಬಂದರೆ ರೈತರು ಸುಲಭವಾಗಿ ಆಕ್ಷೇಪ ಸಲ್ಲಿಸಬಹುದು ಎಂದರು.