ಚಾಮರಾಜನಗರ: ವಾಣಿಜ್ಯೋದ್ಯಮ, ಪ್ರವಾಸೋದ್ಯಮ, ಶೈಕ್ಷಣಿಕವಾಗಿ ಪ್ರಗತಿ ಹಾಗೂ ವೈಚಾರಿಕತೆಯತ್ತ ಸಾಗುತ್ತಿರುವ ಕೊಳ್ಳೇಗಾಲದಲ್ಲಿ ಮತ್ತೆ ಮಾಟ ಮಂತ್ರದ ಕುರುಹುಗಳು ಪತ್ತೆಯಾಗಿವೆ. ಕೊಳ್ಳೇಗಾಲ ತಾಲ್ಲೂಕಿನ ಜಕ್ಕಳಿ ಗ್ರಾಮ ಸಮೀಪದ ಕೋಟೆಕೆರೆ ಪ್ರದೇಶದಲ್ಲಿ ಮಧ್ಯರಾತ್ರಿ ವಾಮಾಚಾರ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ.ಕೆರೆಯಲ್ಲಿ ಬಲಿ ಕೊಟ್ಟ ಕೋಳಿ, ಕೆರೆ ಅಂಗಳದಲ್ಲಿ ಅರಿಶಿಣ, ಕುಂಕುಮ, ಗಂಧದ ಕಡ್ಡಿ, ನಿಂಬೆ ಹಣ್ಣು, ಹಳೆಯ ಬಟ್ಟೆಗಳು ಪತ್ತೆಯಾಗಿವೆ.
ಈ ಸಂಬಂಧ ರೈತ ಸಂಘದ ಶೈಲೇಂದ್ರ ಅವರು, ಕೃಷಿಕರು, ಕೂಲಿ ಕಾರ್ಮಿಕರು ಜಮೀನಿಗೆ ಹೋಗಲು ಭಯ ಪಡುವಂತಾಗಿದೆ. ಈ ಭಾಗದಲ್ಲಿ ಉತ್ತಮ ಮಳೆಯಾಗಿ ಕೆರೆ ತುಂಬಿದ್ದು, ಕೃಷಿಗೆ ನೆರವಾಯಿತು ಎಂದು ರೈತರು ಎಂದುಕೊಂಡಿದ್ದರು. ಆದರೆ, ಕೆರೆ ನೀರಿನಲ್ಲಿ ಬಲಿ ಕೊಟ್ಟ ಕೋಳಿ, ಕೆರೆಯ ದಡದಲ್ಲಿ ಹರಡಿರುವ ಮಾಟ ಮಂತ್ರದ ವಸ್ತುಗಳು ಜನರಲ್ಲಿ ಭಯವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಬೇಕು. ಮಾಟ ಮಂತ್ರದ ಹೆಸರಿನಲ್ಲಿ ಮೋಸ ಮಾಡುವ ಜನರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಪಖ್ಯಾತಿ ಪಡೆದಿದ್ದ ಕೊಳ್ಳೇಗಾಲ : ಈ ಹಿಂದೆ ಕೊಳ್ಳೇಗಾಲ ಮಾಟ ಮಂತ್ರ, ವಾಮಾಚಾರಕ್ಕೆ ಕುಖ್ಯಾತಿ ಪಡೆದಿತ್ತು. ಈ ಭಾಗದಲ್ಲಿ ಇಂದೊಂದು ಆಚರಣೆ ಮತ್ತು ಪದ್ಧತಿಯೂ ಆಗಿತ್ತು. ವಾಮಾಚಾರ ಕಲೆಯಲ್ಲಿ ಪರಿಣಿತಿ ಪಡೆದವರು ಮಾಟ ಮಂತ್ರ ಮಾಡುತ್ತಿದ್ದರು. ಮೋಡಿ ಕೃಷ್ಣ, ಕೃಷ್ಣಯ್ಯ, ಶ್ರೀನಿವಾಸ್ ಶೆಟ್ಟಿ ಇನ್ನಿತರು ಇಲ್ಲಿನ ಪ್ರಸಿದ್ಧ ಮಾಂತ್ರಿಕರಾಗಿದ್ದರು.