ಚಾಮರಾಜನಗರ :ಎರಡು ಆನೆಗಳ ನಡುವೆ ಕಾಳಗ ಏರ್ಪಟ್ಟು ಒಂದು ಆನೆ ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಮಲೆಮಹದೇಶ್ವರ ವನ್ಯಜೀವಿಧಾಮದ ಕೊಳ್ಳೇಗಾಲ ಬಫರ್ ವಲಯದ ಜಾಗೇರಿಯ ದೊಡ್ಡ ಮಾಕಲಿ ಬೀಟ್ನಲ್ಲಿ ನಡೆದಿದೆ. ಮೃತ ಗಂಡಾನೆಗೆ 15 ರಿಂದ 18 ವರ್ಷ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.
ಇನ್ನು ಡಿಸಿಎಫ್ ಸಂತೋಷ್ ಕುಮಾರ್ ಘಟನೆ ಬಗ್ಗೆ,' ಎರಡು ಆನೆಗಳ ನಡುವೆ ಭಾರೀ ಕಾಳಗ ನಡೆದು ಪರಸ್ಪರ ಗುದ್ದಾಟದಲ್ಲಿ ಈ ಆನೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದೆ' ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತ ಆನೆಯ ದಂತಗಳನ್ನು ಅರಣ್ಯ ಇಲಾಖೆ ತಮ್ಮ ಸುಪರ್ದಿಗೆ ಪಡೆದುಕೊಂಡ ನಂತರ ಆನೆಯ ಶರೀರವನ್ನು ಹೂಳಲಾಗಿದೆ.
ಬಹು ಅಂಗಾಂಗ ವೈಫಲ್ಯದಿಂದ ಕೊಡಗಿನಲ್ಲಿ ಸಾವನ್ನಪ್ಪಿತ್ತು ಕಾಡಾನೆ:ಕಡಬ ತಾಲೂಕಿನ ಕೊಂಬಾರು ಸಮೀಪದಿಂದ 50 ವರ್ಷದ ಗಂಡು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಕೊಡಗಿನ ಮತ್ತಿಗೋಡು ಆನೆ ಶಿಬಿರದಲ್ಲಿ ಬಹು ಅಂಗಾಂಗ ವೈಫಲ್ಯ ಮತ್ತು ಕಾಲಿನ ವಾತ ಕಾಯಿಲೆಯಿಂದ ಮೃತಪಟ್ಟಿತ್ತು. ಈ ಆನೆ ಕಡಬದ ರೆಂಜಿಲಾಡಿಯ ನೈಲಾ ಎಂಬಲ್ಲಿ ಕಳೆದ ಫೆಬ್ರವರಿ 20ರಂದು ಬೆಳಗ್ಗೆ ಹಾಲು ಸಂಗ್ರಹ ಕೇಂದ್ರಕ್ಕೆ ಆಗಮಿಸುತ್ತಿದ್ದ ರಂಜಿತಾ (24) ಹಾಗೂ ಅವರ ರಕ್ಷಣೆಗೆ ಆಗಮಿಸಿದ ರಮೇಶ್ ರೈ (58) ಎಂಬವರ ಮೇಲೆ ಕಾಡಾನೆಗಳು ದಾಳಿ ಮಾಡಿ ಸಾಯಿಸಿದ್ದವು. ಇದರ ನಂತರದಲ್ಲಿ ಕೊಂಬಾರು ಭಾಗದ ಮಂಡೆಕರ ಎಂಬಲ್ಲಿಂದ ದಾಳಿ ಮಾಡಿದ ಆನೆ ಎಂದು ಸೆರೆ ಹಿಡಿಯಲಾಗಿದ್ದ ಗಂಡು ಕಾಡಾನೆಯನ್ನು ಕೊಡಗಿನ ಮತ್ತಿಗೋಡು ಆನೆ ಶಿಬಿರಕ್ಕೆ ಸೇರಿಸಲಾಗಿತ್ತು. ಈ ಕಾಡಾನೆ ಆಗಸ್ಟ್ 11ರ ಶುಕ್ರವಾರ ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದರು.