ಬೆಂಗಳೂರು: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಸವನಗುಡಿ, ಪದ್ಮನಾಭನಗರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗ್ಗೆ ಚುರುಕಿನಿಂದ ಆರಂಭವಾಗಿದ್ದ ಬಸವನಗುಡಿ ಹಾಗೂ ಪದ್ಮನಾಭನಗರ ಕ್ಷೇತ್ರದ ಮತದಾನ ಪ್ರಕ್ರಿಯೆ ಬೆಳಗ್ಗೆ 11 ಗಂಟೆ ನಂತರ ಮಂದಗತಿಯಲ್ಲಿ ಸಾಗಿತು. ಸಂಜೆ ವೇಳೆ ಕೂಡ ಚುರುಕಿನ ಮತದಾನ ಆಗಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ಕಳೆದ ಬಾರಿಯ ರೀತಿಯಲ್ಲಿಯೇ ಈ ಬಾರಿಯೂ ಮತದಾನ ಮಂದಗತಿಯಲ್ಲಿ ಮುಕ್ತಾಯವಾಯಿತು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ಈ ಎರಡೂ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಯಿತು. ಮತದಾರರು ಯಾರೂ ಮತಗಟ್ಟೆ ಆವರಣದಲ್ಲಿ ಇಲ್ಲದೆ ಖಾಲಿ ಖಾಲಿ ಹೊಡೆದ ಕಾರಣ 6 ಗಂಟೆಗೆ ಸರಿಯಾಗಿ ಚುನಾವಣಾ ಸಿಬ್ಬಂದಿ ಮತಗಟ್ಟೆಗಳನ್ನು ಮುಚ್ಚಿದರು.
ಮತದಾನ ಮುಗಿದ ನಂತರ ಎಲ್ಲಾ ಮತ ಯಂತ್ರಗಳಿಗೆ ಸೀಲ್ ಹಾಕಿ, ಪೆಟ್ಟಿಗೆಯಲ್ಲಿರಿಸಿ ಬಿಗಿ ಭದ್ರತೆ ಮೂಲಕ ಸ್ಟ್ರಾಂಗ್ ರೂಂಗೆ ಮಷಿನ್ಗಳನ್ನು ರವಾನಿಸಿದರು. ಮೇ 23 ರಂದು ಮತ ಎಣಿಕೆ ದಿನ ಇವಿಎಂ ಮಷಿನ್ಗಳನ್ನ ಆಯಾ ಪಕ್ಷಗಳ ಏಜೆಂಟರ್ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಅಲ್ಲಿಯವರೆಗೂ ಪೊಲೀಸ್ ಹಾಗೂ ಮಿಲಿಟರಿ ಸರ್ಪಗಾವಲಿನಲ್ಲಿ ಮಧ್ಯೆ ಭದ್ರತೆ ಕಲ್ಪಿಸಲಾಗುತ್ತದೆ.