ಬಸವಕಲ್ಯಾಣ: ಬಿಜೆಪಿ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿದರೂ ಕ್ರಮ ಕೈಗೊಳ್ಳಲು ಆಗದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಒಬ್ಬ ಅಸಮರ್ಥ ಅಧ್ಯಕ್ಷ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ತಾಲೂಕಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ನಲ್ಲಿರುವ ಪ್ರಮುಖ ಸಚಿವರಾಗಿರುವ ಈಶ್ವರಪ್ಪ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಮೇ ತಿಂಗಳಲ್ಲಿ ಮುಖ್ಯಮಂತ್ರಿಗಳು ಮನೆಗೆ ಹೋಗ್ತಾರೆ ಅಂತ ಯತ್ನಾಳ್ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಇಂಥವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗದೇ, ಕೈಕಟ್ಟಿ ಕುಳಿತಿರುವ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅಸಮರ್ಥ ಅಧ್ಯಕ್ಷ ಎಂದು ಛೇಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಿನ್ನಾಭಿಪ್ರಾಯಗಳಿಲ್ಲ. ನಾನು ಡಿ. ಕೆ. ಶಿವಕುಮಾರ್ ಇಬ್ಬರು ಕೂಡಿಕೊಂಡೇ ಉಪ ಚುನಾವಣೆ ಪ್ರಚಾರ ನಡೆಸುತ್ತಿದ್ದೇವೆ. ಸಮಾಜದಲ್ಲಿರುವ ಬಡವರು, ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದೇವೆ. ನಾವು ಯಾವತ್ತಿಗೂ ಅಹಿಂದ ಪರವಾಗಿಯೇ ಇದ್ದೇವೆ. ಅಹಿಂದ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಅಹಿಂದ ಜನರ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು ಎಂದು ವ್ಯಂಗ್ಯವಾಡಿದರು.