ಬೀದರ್:ರಾಜೀವ್ ಗಾಂಧಿ ವಸತಿ ನಿಗಮದ ವಿವಿಧ ಯೋಜನೆಗಳ ಅಡಿಯಲ್ಲಿ ಆಪ್ತ ಸಹಾಯಕರ ಮೂಲಕ ದುರ್ಬಳಕೆ ನಡೆದಿದೆ ಎಂಬ ಆರೋಪದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಭಿಪ್ರಾಯ ಕೇಳಿ ಜಿಲ್ಲಾ ಪಂಚಾಯತ್ ಸಿಇಒ ಖಂಡ್ರೆಗೆ ಪತ್ರ ಬರೆದಿದ್ದಾರೆ.
ವಸತಿ ಯೋಜನೆ ದುರ್ಬಳಕೆ ಆರೋಪ: ಖಂಡ್ರೆಗೆ ನೋಟಿಸ್ - Housing Plan Abuse
ರಾಜೀವ್ ಗಾಂಧಿ ವಸತಿ ನಿಗಮದ ವಿವಿಧ ಯೋಜನೆಗಳ ಅಡಿಯಲ್ಲಿ ಆಪ್ತ ಸಹಾಯಕರ ಮೂಲಕ ದುರ್ಬಳಕೆ ನಡೆದಿದೆ ಎಂಬ ಆರೋಪದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಭಿಪ್ರಾಯ ಕೇಳಿ ಜಿಲ್ಲಾ ಪಂಚಾಯತ್ ಸಿಇಒ ಗ್ಯಾನೇಂದ್ರಕುಮಾರ್ ಗಂಗ್ವಾರ, ಖಂಡ್ರೆಗೆ ಪತ್ರ ಬರೆದಿದ್ದಾರೆ.
ಈ ಕುರಿತು ಹೊರಡಿಸಿದ ಪತ್ರದಲ್ಲಿ ಭಾಲ್ಕಿ ತಾಲೂಕಿನಲ್ಲಿ ವಿವಿಧ ವಸತಿ ಯೋಜನೆಯಡಿಯಲ್ಲಿ ಬಡವರ ಮನೆಗಳನ್ನು ಶ್ರೀಮಂತರ ಪಾಲು ಮಾಡಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ಇ-ಮೇಲ್ ಐಡಿ, ಪಾಸ್ವರ್ಡ್ ಬಳಸಿ ಖಾಸಗಿ ಕಂಪ್ಯೂಟರ್ ಬಳಕೆ ಮಾಡಿಕೊಂಡು ಫಲಾನುಭವಿಗಳಿಗೆ ಮನೆ ಮಂಜೂರಾತಿ ಆದೇಶ ಪತ್ರದಲ್ಲಿ ತಮ್ಮ ಭಾವಚಿತ್ರವನ್ನು ಮುದ್ರಿಸಿ ತಮ್ಮ ಸಹಿಯೊಂದಿಗೆ ನೀಡಿದ್ದು, ತಮ್ಮ ನಿವಾಸದ ಮುಂದೆ ಸಂಪೂರ್ಣ ಪ್ರಕ್ರಿಯೆ ಮಾಡಲಾಗಿದೆ ಎಂದು ಡಿ.ಕೆ.ಸಿದ್ರಾಮ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಭಿಪ್ರಾಯ ನೀಡುವಂತೆ ಜಿಪಂ ಸಿಇಒ ಗ್ಯಾನೇಂದ್ರಕುಮಾರ್ ಗಂಗ್ವಾರ ಕೋರಿದ್ದಾರೆ.
ಈಶ್ವರ್ ಖಂಡ್ರೆ ಆಪ್ತ ಸಹಾಯಕರಾದ ಬಸವರಾಜ್, ಉಮೇಶ್ ಎಂಬಾತರ ಮೊಬೈಲ್ ಐಎಂಇಐ ಬಳಸಿರುವುದು ಬಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಒಂದು ವಾರದೊಳಗಾಗಿ ತಮ್ಮ ಅಭಿಪ್ರಾಯವನ್ನು ನೀಡಲು ಸಿಇಒ ಪತ್ರದಲ್ಲಿ ಮನವಿ ಮಾಡಿದ್ದಾರೆ.