ಬಳ್ಳಾರಿ: ನಾವ್ ಬೀಳೋದಿಲ್ಲ. ನೀವ್ ಮತ್ತೆ ಕಟ್ಟೋದಿಲ್ಲ. ಬಿಜೆಪಿಗರು ಸರ್ಕಸ್ ಮಾಡ್ತಿದಾರೆ ಎಂದು ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ವಾಗ್ದಾಳಿ ನಡೆಸಿದ್ದಾರೆ.
ಡಿಸಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವ್ (ಮೈತ್ರಿಕೂಟ ಸರ್ಕಾರ) ಬೀಳೋದಿಲ್ಲ. ನಮ್ ಬುಡ ಗಟ್ಟಿಯಾಗಿದೆ. ನೀವ್ (ಬಿಜೆಪಿಗರು) ಕಟ್ಟೋದಿಲ್ಲ. ನಿಮ್ಗೆ ಈ ಸರ್ಕಾರ ಬೀಳುತ್ತದೆ ಎಂಬ ಭ್ರಮನಿರಸನ ಆಗಿಬಿಟ್ಟಿದೆ. ಆಗಾಗಿ, ನಮ್ ಕಡೆ ಈ ಹಳ್ಳಿಗಳಲ್ಲಿ ದೊಂಬರಾಟ ನಡೆಯುತ್ತೆ. ಅದೇ ಮಾದರಿಯಲ್ಲೇ ಈ ಬಿಜೆಪಿಗರು ದೊಂಬರಾಟ ನಡೆಸುತ್ತಿದ್ದಾರೆಂದು ದೂರಿದ್ದಾರೆ.
ಬಿಜೆಪಿ ವಿರುದ್ಧ ಐವಾನ್ ಡಿಸೋಜಾ ವಾಗ್ದಾಳಿ ಈ ಮೈತ್ರಿಕೂಟದ ಸರ್ಕಾರ ಬೀಳಿಸುವ ಬಿಜೆಪಿ ಗೇಮ್ ಪ್ಲಾನ್ ವರ್ಕೌಟ್ ಆಗುತ್ತಿಲ್ಲ. ಬಿಜೆಪಿಯವರು ಸರ್ಕಾರವನ್ನ ಅಸ್ಥಿರಗೊಳಿಸಲು ಪ್ರಯತ್ನಿಸಿ 9 ಬಾರಿ ಫೇಲ್ ಆಗಿದ್ದಾರೆ. ನೀವೆಲ್ಲಾ ಫೇಲ್ ಸ್ಟುಡೆಂಟ್ಸ್, ನಿಮಗೆ ಮತ್ತೆ ಪ್ರಯತ್ನಿಸುವ ಅವಕಾಶಗಳಿಲ್ಲ. ನೀವೆಲ್ಲ ರಾಜಕಾರಣ ಮಾಡಲು ಅನ್ ಫಿಟ್ ಎಂದು ಐವಾನ್ ಛೇಡಿಸಿದ್ದಾರೆ.
ರಾಜಕೀಯದಲ್ಲಿ ಶಾಸಕರು ಆ ಪಕ್ಷದಿಂದ ಈ ಪಕ್ಷಕ್ಕೆ ಹೋಗಿ ಬರೋದು ಮಾಮೂಲಿ. ಬಿಜೆಪಿಯವರಿಗೆ ದೊಡ್ಡಾಟ ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಿಕ್ಕಚಿಕ್ಕ ಮೇಳ ಕಟ್ಟಿ ಕುಣಿಯುತ್ತಿದ್ದಾರೆ. ನಾಲ್ಕು ಜನರನ್ನು ಹಿಡಿದು ಬಯಲಾಟ ಆಟವಾಡುತ್ತಿದ್ದಾರೆ. ಬಳಿಕ ಬಂದ ದಕ್ಷಿಣೆ ತಗೆದುಕೊಂಡು ಹೋಗ್ತಾರೆ ಅಂತಾ ಡಿಸೋಜಾ ವ್ಯಂಗ್ಯವಾಡಿದ್ದಾರೆ.