ಹೊಸಪೇಟೆ:ತಾಲೂಕು ಕಚೇರಿಯ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಉಪವಿಭಾಗಾಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ಬಳಿಕ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371(ಜೆ) ಸೌಲಭ್ಯದಿಂದಾಗಿ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿ ಲಭಿಸಿದೆ. 2013ರ ನಂತರ ಕಲ್ಯಾಣ ಕರ್ನಾಟಕ ಭಾಗದ ಜನರು ಉನ್ನತ ಹುದ್ದೆ ಪಡೆದಿದ್ದಾರೆ. ಕಳೆದ 10 ವರ್ಷಗಳಿಂದೆಚೆಗೆ ಈ ಭಾಗವು ಅಭಿವೃದ್ಧಿಯಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಇನ್ನೂ ಅಭಿವೃದ್ಧಿ ಸಾಧಿಸಬೇಕಿದೆ ಎಂದರು.
ಬಳಿಕ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಆಡಳಿತದಲ್ಲಿ ಗೃಹಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು ತಮ್ಮ ಆಡಳಿತದಲ್ಲಿ 500 ಸಂಸ್ಥಾನಗಳನ್ನು ವಿಲೀನಗೊಳಿಸಿದ್ದರು. ಆದರೆ ಹೈದರಾಬಾದ್ ನಿಜಾಮರು ಮಾತ್ರ ವಿಲೀನಕ್ಕೆ ನಿರಾಕರಿಸಿದಾಗ ನೆಹರೂ ಸಲಹೆ ಮೇರೆಗೆ ಮಿಲಿಟರಿ ಕಾರ್ಯಾಚರಣೆಯನ್ನು ಕೊಪ್ಪಳ, ಹೊಸಪೇಟೆ ಮೂಲಕ ನಡೆಸಿ ನಿಜಾಮರ ಆಡಳಿತಕ್ಕೆ ಅಂತ್ಯ ನೀಡಿದ ಯಶಸ್ಸು ಪಟೇಲರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಹೆಚ್.ವಿಶ್ವನಾಥ್, ನಗರಸಭೆ ಆಯುಕ್ತೆ ಜಯಲಕ್ಷ್ಮೀ, ತಾಲೂಕು ಪಂಚಾಯಿತಿ ಇಒ ಶ್ರೀಕುಮಾರ ಇನ್ನಿತರರಿದ್ದರು.