ಬಳ್ಳಾರಿ: ಪತ್ರಕರ್ತರಾದವರಿಗೆ ವೃತ್ತಿ ಬದುಕಿನ ಆಚೆಗೂ ಅಸ್ತಿತ್ವ ಹೊಂದಿರಬೇಕು. 10 ವರ್ಷಗಳಿಗೊಮ್ಮೆ ಬದಲಾಗುತ್ತಿರುವ ಮಾಧ್ಯಮದ ಲೋಕದಲ್ಲಿ ಸೂಕ್ಷ್ಮತೆಗಳನ್ನು ಯುವ ಪತ್ರಕರ್ತರು ಅರ್ಥೈಸಿಕೊಳ್ಳಬೇಕು ಎಂದು ಪತ್ರಕರ್ತ ನರಸಿಂಹಮೂರ್ತಿ ಅವರು ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಪತ್ರಿಕಾ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಮತ್ತು ಕ್ಷೇತ್ರ ಪ್ರಚಾರ ಕಾರ್ಯ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ತರಬೇತಿ ಕಾರ್ಯಾಗಾರದಲ್ಲಿ ಪತ್ರಕರ್ತ ನರಸಿಂಹಮೂರ್ತಿ ಅವರಿಂದ ಉಪನ್ಯಾಸ ಯಾವುದೇ ವರ್ಗದ ಜನರ ಮೇಲೆ ಪೂರ್ವಾಗ್ರಹ ದೃಷ್ಟಿಕೋನಗಳನ್ನು ಹೊಂದಿರಬಾರದು. ವಸ್ತನಿಷ್ಠತೆ, ನಿಷ್ಪಕ್ಷಪಾತದ ವರದಿಗಾರಿಕೆಗೆ ಹೆಚ್ಚಿನ ಓದು, ವಿಶ್ಲೇಷಣಾತ್ಮಕ, ವಿಮರ್ಶಾತ್ಮಕ ಮನಸ್ಥಿತಿ ಮುಖ್ಯವಾಗುತ್ತದೆ ಎಂದು ಹೇಳಿದರು.
ಮಾಧ್ಯಮ ರಂಗದ ಪ್ರಸ್ತುತ ಸವಾಲುಗಳು, ಬದಲಾಗುತ್ತಿರುವ ಮಾಧ್ಯಮ ಜಗತ್ತಿಗೆ ಸಜ್ಜುಗೊಳ್ಳಬೇಕಾದ ರೀತಿಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮೂರು ಗಂಟೆಗಳ ಕಾಲ ಉಪನ್ಯಾಸ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ತರಬೇತಿಯ ಅವಶ್ಯಕತೆ ಬಗ್ಗೆ ಮಾತನಾಡಿದರು ಹಾಗೂ ಪ್ರತಿವಾರ ಮಾಧ್ಯಮಕ್ಷೇತ್ರದ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಕಚೇರಿಗೆ ಆಹ್ವಾನಿಸಿ ಅವರೊಂದಿಗೆ ಸಂವಾದ ನಡೆಸಲಾಗುವುದು ಎಂದರು.