ಬಳ್ಳಾರಿ : ಸಂಡೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಎಸ್.ದಿವಾಕರ್ ಬದಲಿಗೆ ಶಿಲ್ಪಾ ರಾಘವೇಂದ್ರ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನ ಹೊರ ಹಾಕಿದ ದಿವಾಕರ್ ಅವರು ಇಂದು ಬೆಂಬಲಿಗರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಬೆಂಬಲಿಗರನ್ನುದ್ಧೇಶಿಸಿ ಮಾತನಾಡುವಾಗ ಭಾವುಕರಾಗಿ ಕಣ್ಣೀರು ಹಾಕಿದರು. ಇದನ್ನು ನೋಡಿ ಸಭೆಯಲ್ಲಿ ಹಾಜರಿದ್ದ ಇಬ್ಬರು ಮಹಿಳಾ ಕಾರ್ಯಕರ್ತರು ಕೂಡ ಕಣ್ಣೀರು ಹಾಕಿದ ಘಟನೆ ನಡೆಯಿತು.
ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಬೆಂಬಲಿಗ ಕೆ.ಎಂ.ಸ್ವಾಮಿ ಅವರು ದಿವಾಕರ್‌ಗೆ ಒಂದು ಲಕ್ಷ ರೂ.ಗಳ ಚೆಕ್ ನೀಡಿದರು. ಮತ್ತೊಂದೆಡೆ ಬೆಂಬಲಿಗರು ಕೂಡ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದರು. ಸಭೆ ಮುಗಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ದಿವಾಕರ್, ಬೆಂಬಲಿಗರ ಒತ್ತಾಯದಂತೆ ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಪಕ್ಷೇತರನಾಗಿ ಸ್ಪರ್ಧೆ ಮಾಡಬೇಕೋ? ಅಥವಾ ಪಕ್ಷದಿಂದ ಸ್ಪರ್ಧೆ ಮಾಡಬೇಕೋ? ಎಂಬುದನ್ನು ಇನ್ನೂ ಎರಡು ದಿನಗಳಲ್ಲಿ ತೀರ್ಮಾನಿಸುವೆ. ಈ ಎರಡು ದಿನಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇನೆ ಎಂದರು.
ಸಂಡೂರಿನ ವಿಜಯ ಸರ್ಕಲ್‌ನಲ್ಲಿ ಟೈರಿಗೆ ಬೆಂಕಿ ಹಚ್ಚಿ ದಿವಾಕರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಕಾಂಗ್ರೆಸ್‌ನೊಂದಿಗೆ ಹಿರಿಯ ಬಿಜೆಪಿ ಮುಖಂಡರ ಒಳ ಒಪ್ಪಂದ ಆಗಿದೆ. ಕೆ.ಎಸ್.ದಿವಾಕರ್ ಅವರಿಗೆ ಕಳೆದ ಚುನಾವಣೆಯಲ್ಲೂ ಅನ್ಯಾಯ ಆಗಿದೆ ಎಂದು ಆರೋಪಿಸಿದರು.
ಸಭೆ ನಡೆಸುವ ಮುನ್ನವೇ ಬಳ್ಳಾರಿ ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಕೆ.ಎಸ್.ದಿವಾಕರ್, ಪಕ್ಷ ಸಂಘಟನೆಯಲ್ಲಿ ಹಗಲು ರಾತ್ರಿ ಕೆಲಸ ಮಾಡಿದವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಟಿಕೆಟ್ ಮಾರಾಟವಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಈ ರೀತಿಯ ನಿರ್ಧಾರಗಳಿಂದ ಪಕ್ಷದಲ್ಲಿ ತತ್ವ ಸಿದ್ದಾಂತಗಳಿಗೆ ಬೆಲೆ ಇಲ್ಲದಂತಾಗಿದ್ದು, ಸಂಡೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ. ಸತತ 10 ವರ್ಷಗಳ ಕಾಲ ನಾನು ಬಿಜೆಪಿಯಲ್ಲಿದ್ದು ಸಂಘಟನೆ ಮಾಡಿದ್ದೇನೆ. ನೈಜವಾಗಿ ಪಕ್ಷಕ್ಕಾಗಿ ಶ್ರಮಿಸಿದವರಿಗೆ ಟಿಕೆಟ್ ನೀಡಿಲ್ಲ. ಪಕ್ಷದ ಪ್ರಾಥಮಿಕ ಸದಸ್ಯತ್ವ ಇಲ್ಲದವರಿಗೆ ನೀಡಿದ್ದಾರೆ. ಕಳೆದ ಮೂರು ವಿಧಾನಸಭಾ ಚುನಾವಣೆಗಳಿಂದ ಆಕಾಂಕ್ಷಿಯಾಗಿದ್ದ ನನಗೆ ಮೂರು ಬಾರಿಯೂ ಬಿಜೆಪಿ ಮೋಸ ಮಾಡಿದೆ ಎಂದಿದ್ದರು.
ಬಿಜೆಪಿ ಟಿಕೆಟ್ ವಂಚಿತ ಕೆ.ಎಸ್.ದಿವಾಕರ್ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧೆ?:ಚುನಾವಣೆಯಲ್ಲಿ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತೀರ್ ಎಂಬ ಪ್ರಶ್ನೆಗೆ ಉತ್ತರಿಸಿದ ದಿವಾಕರ್, ಕಾರ್ಯಕರ್ತರ ಸಭೆ ಕರೆದಿದ್ದೇನೆ. ಜನಾರ್ಧನ ರೆಡ್ಡಿ ಅವರ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸುವುದರ ಬಗ್ಗೆ ಕೂಡ ಕಾರ್ಯಕರ್ತರ ಅಭಿಪ್ರಾಯ ಕೇಳುತ್ತೇನೆ. ಈಗಾಗಲೇ ಕೆಆರ್‌ಪಿಪಿ ಯಿಂದಲೂ ನನಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನ ಬರುತ್ತಿದೆ. ನೋಡೋಣ, ಕಾರ್ಯಕರ್ತರ ಸಭೆ ಬಳಿಕ ಅಭಿಪ್ರಾಯ ತೆಗೆದುಕೊಂಡು ಅಂತಿಮ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ :ಕೈ ತಪ್ಪಿದ ಬೈಲಹೊಂಗಲ ಟಿಕೆಟ್: ಬಿಜೆಪಿ ವಿರುದ್ಧ ಡಾ.ವಿಶ್ವನಾಥ ಪಾಟೀಲ ಬಂಡಾಯ