ಬಳ್ಳಾರಿ: ಸೂರ್ಯಕಾಂತಿ ಗಿಡ ನೆಲಕಚ್ಚುವ ಹಂತಕ್ಕೆ ತಲುಪಿದ್ದು, ಕಳಪೆ ಬೀಜ ಬಿತ್ತನೆಯೇ ಇದಕ್ಕೆ ಕಾರಣ ಎಂದು ಆರೋಪಿಸಿರುವ ರೈತರು ಕಂಗಾಲಾಗಿದ್ದಾರೆ.
ಹಳೆ ಯರ್ರಗುಡಿ ಗ್ರಾಮದ ರೈತರಿಗೆ ಸೂರ್ಯಕಾಂತಿ ಗಂಗಾ ಕಾವೇರಿ (ಎಂ.ಎಸ್.ಜಿ.ಕೆ-2022) ಎಂಬ ಹೆಸರಿನ ಸೂರ್ಯಕಾಂತಿ ಬೀಜಗಳನ್ನು ಹಾವೇರಿ ರಾಣೆಬೆನ್ನೂರಿನ ಶ್ರೀಮಾತಾ ಸೀಡ್ಸ್ ಕಂಪನಿ ಪೂರೈಸಿತ್ತು. ಕಟಾವು ಆಗುವ ಮೊದಲೇ ಸೂರ್ಯಕಾಂತಿ ಬೀಜಗಳ ಇಳುವರಿ ಇಳಿಮುಖ ಆಗುವ ದಟ್ಟ ಲಕ್ಷಣಗಳು ಕಂಡು ಬಂದಿವೆ.
ಬಳ್ಳಾರಿಯಲ್ಲಿ ಸೂರ್ಯಕಾಂತಿ ಇಳುವರಿ ಕುಸಿತ ಸೂರ್ಯಕಾಂತಿ ಬೆಳೆ ಸಾಮಾನ್ಯವಾಗಿ ಒಂದು ಗಿಡವಾಗಿ ಬೆಳೆದು ಕಾಂಡವು ದಷ್ಟಪುಷ್ಟಗೊಂಡು ಹೂವು ಅರಳಿ ತದನಂತರದಲ್ಲಿ ತೆನೆಯಾಗಿ ರೂಪುಗೊಳ್ಳುತ್ತದೆ. ಇದು ಯಾವುದೇ ಕಂಪನಿಯ ಬೀಜಗಳನ್ನು ಬಿತ್ತಿದಾಗ ಸಿಗುವ ಫಲಿತಾಂಶ. ಆದರೆ ಹಾವೇರಿ ಕಂಪನಿಯ ಬೀಜಗಳನ್ನು ಬಿತ್ತಿದ ರೈತರಿಗೆ ಈಗ ಸಂಕಷ್ಟ ಎದುರಾಗಿದೆ.
ಒಂದೇ ಗಿಡದಲ್ಲಿ ಹಲವು ಹೂವುಗಳು ಬೆಳೆದು, ಅವು ತೆನೆಗಳಾಗುತ್ತಿವೆ. ಹೀಗೆ ಬೆಳೆ ಬಂದರೆ ಗಿಡದ ಶಕ್ತಿ ಹಲವು ಕಡೆಗಳಲ್ಲಿ ಹಂಚಿ ಹೋಗಿ ಉತ್ತಮ ರೀತಿಯಲ್ಲಿ ಬೆಳೆ ಬರುವುದಿಲ್ಲ ಎಂಬುದು ಈ ಹಿಂದೆ ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ.
ಇದೀಗ ಒಂದೇ ಗಿಡದಲ್ಲಿ ಹಲವು ತೆನೆಗಳು ಬೆಳೆದಿದ್ದು, ಹೆಚ್ಚು ಇಳುವರಿಯ ಆಸೆ ಹೊತ್ತಿದ್ದ ರೈತರು ಕಂಗಾಲಾಗಿದ್ದಾರೆ. 180 ರಿಂದ 200 ಎಕರೆ ಪ್ರದೇಶದಲ್ಲಿ ಈ ಗಂಗಾ ಕಾವೇರಿ (ಎಂ.ಎಸ್.ಜಿ.ಕೆ-2022) ಬೀಜ ಬಿತ್ತನೆ ಮಾಡಲಾಗಿದೆ.
ಕಂಪನಿ ಕಡೆವರೇ ಕರೆ ಮಾಡಿ ಬೀಜ ಪೂರೈಸಿದರು: ಪ್ರತಿ ವರ್ಷ ಈ ಭಾಗದ ರೈತರು ಬಳ್ಳಾರಿಯಲ್ಲೇ ದೊರೆಯುವ ವಿವಿಧ ಕಂಪನಿಗಳ ಸೂರ್ಯಕಾಂತಿ ಬೀಜಗಳನ್ನು ಖರೀದಿಸಿ ಬಿತ್ತುತ್ತಿದ್ದರು. ರಾಣೆಬೆನ್ನೂರಿನ ಶ್ರೀಮಾತಾ ಸೀಡ್ಸ್ ಕಂಪನಿಯವರು ತಮ್ಮ ಉತ್ಪನ್ನಗಳಲ್ಲಿ ಒಂದಾದ ಗಂಗಾ ಕಾವೇರಿ (ಎಂ.ಎಸ್.ಜಿ.ಕೆ-2022) ಎಂಬ ಬ್ರ್ಯಾಂಡಿನ ಬೀಜಗಳನ್ನು ಬಿತ್ತುವಂತೆ ರೈತರನ್ನು ಸಂಪರ್ಕಿಸಿದರು.
ಇವು ಉತ್ತಮ ಇಳುವರಿಯ ಬೀಜಗಳೆಂದು ನಂಬಿಸಿ ಸಾವಿರಾರು ರೂ.ಗಳನ್ನು ಪಡೆದು ಬೀಜ ನೀಡಿದರು. ಎಕರೆಗೆ 20 ಸಾವಿರ ರೂ.ಗಳಂತೆ ರೈತರು ಹಣವನ್ನು ಖರ್ಚು ಮಾಡಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಹಾಕಿದ ಬಂಡವಾಳ ವಾಪಸ್ ಬರುವಂತಿಲ್ಲ.
ಇದನ್ನೂ ಓದಿ:ರಾಮನಗರದಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ಪ್ರತ್ಯಕ್ಷ.. ಗ್ರಾಮಸ್ಥರನ್ನ ಅಟ್ಟಾಡಿಸಿಕೊಂಡು ಹೋದ ಗಜರಾಜ!
ರೈತರ ಕಷ್ಟ ಕೇಳುವವರಿಲ್ಲ: ಬೀಜಗಳನ್ನು ಬಿತ್ತಿ ಈಗಾಗಲೇ 90 ದಿನಗಳಾಗಿವೆ. ಇದೀಗ ಉತ್ತಮ ಇಳುವರಿ ಬರಬೇಕಿತ್ತು. ಆದರೆ ಒಂದೊಂದು ಗಿಡ ಐದು, ಆರು ತೆನೆಗಳನ್ನು ಬಿಟ್ಟಿದೆ. ಒಂದೇ ತೆನೆ ಬಿಟ್ಟಿರುವ ಗಿಡಗಳು ಉತ್ತಮವಾಗಿಲ್ಲ. ಇದಕ್ಕೆ ಬೀಜಗಳು ಕಳಪೆ ಇರುವುದೇ ಕಾರಣ ಎನ್ನುತ್ತಿದ್ದಾರೆ ರೈತರು.
ತಮ್ಮ ಈ ಸಮಸ್ಯೆಗೆ ಪರಿಹಾರ ನೀಡಿ ಎಂದು ಕೃಷಿ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಅಧಿಕಾರಿಗಳ ಕೈ ಕಾಲು ಹಿಡಿದರೂ ಕೂಡ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಳೆ ಯರ್ರಗುಡಿ ರೈತರು ಆರೋಪಿಸಿದ್ದಾರೆ.