ಬಳ್ಳಾರಿ: ನೆರೆಯ ಆಂಧ್ರಪ್ರದೇಶ ಹಾಗೂ ಹೈ-ಕ ಭಾಗದ ತ್ರಿವಳಿ ಜಿಲ್ಲೆಗಳ ಜನರ ಆರೋಗ್ಯ ಸಂಜೀವಿನಿಯಾಗಿದ್ದ ವಿಮ್ಸ್ ಆಸ್ಪತ್ರೆಗೂ ಕೊರೊನಾ ಸೋಂಕು ವ್ಯಾಪಿಸಿದ್ದು, ಇದೀಗ ಆಸ್ಪತ್ರೆಯಲ್ಲಿನ ರೋಗಿಗಳು ಭಯಭೀತರಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಸಿರಗುಪ್ಪ ತಾಲೂಕಿನ ಗೋಸಬಾಳ ಗ್ರಾಮದ 18 ವರ್ಷದ ಯುವತಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಳು. ಇದೀಗ ಆಕೆಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅತೀವ ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಮುಂಜಾಗ್ರತಾಕ್ರಮವಾಗಿ ಕೋವಿಡ್-19 ಪರೀಕ್ಷೆಗೆ ಜಿಲ್ಲಾಡಳಿತ ಒಳಪಡಿಸಿತ್ತು. ವರದಿಯಲ್ಲಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ನಿನ್ನೆ ಆಕೆಯನ್ನು ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಿರುವುದಾಗಿ ಜಿಲ್ಲಾಧಿಕಾರಿ ಎಸ್ಎಸ್ ನಕುಲ್ ತಿಳಿಸಿದ್ದಾರೆ.
ಇದೀಗ ಯುವತಿಗೆ ಚಿಕಿತ್ಸೆ ನೀಡಿದ ವಿಮ್ಸ್ ವೈದ್ಯರು ಹಾಗೂ ಆಕೆಯನ್ನು ವಾರ್ಡ್ಗೆ ಶಿಫ್ಟ್ ಮಾಡಿದ ವಿಮ್ಸ್ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ಯುವತಿ ವಿಮ್ಸ್ನಲ್ಲಿ ಓಡಾಡಿದ ಹಿನ್ನೆಲೆಯಲ್ಲಿ ಸಿಸಿಟಿವಿ ಪರಿಶೀಲನೆ ನಡೆಸುತ್ತಿರುವ ವಿಮ್ಸ್ ಆಡಳಿತ ಮಂಡಳಿ, ಆಸ್ಪತ್ರೆಯ 25ಕ್ಕೂ ಅಧಿಕ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೂ 17 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಈಗಾಗಲೇ 11 ಮಂದಿ ಗುಣಮುಖರಾಗಿದ್ದಾರೆ.
ಗಡಿಭಾಗಕ್ಕೆ ಹೋಗಿದ್ದ ಯುವತಿ:ನೆರೆಯ ಆಂಧ್ರಪ್ರದೇಶ ಭಾಗದ ಹೊಳಲಗುಂದಿ ಗ್ರಾಮದಲ್ಲಿ ನೆಲೆಸಿರುವ ತಮ್ಮ ಅಣ್ಣನ ಮನೆಗೆ ಈ ಯುವತಿ ಹೋಗಿದ್ದಳು ಎಂಬ ಮಾಹಿತಿಯೂ ಲಭ್ಯವಾಗಿದ್ದು, ಜಿಲ್ಲಾಡಳಿತ ಇದೀಗ ಹುಡಗಿಯ ಟ್ರಾವೆಲ್ ಹಿಸ್ಟರಿ ಹುಡುಕಾಟದಲ್ಲಿ ತೊಡಗಿದೆ.