ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ ಹಿಂದ್ ಟ್ರೇಡರ್ಸ್ ಮೈನಿಂಗ್ ಕಂಪನಿಯೊಂದಿಗೆ ಸಚಿವ ಈಶ್ವರಪ್ಪನವರ ಆಪ್ತರು ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಗಣಿ ಅಕ್ರಮ ಹೋರಾಟಗಾರ ಟಪಾಲ್ ಗಣೇಶ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಈಶ್ವರಪ್ಪನವರ ಪರಮಾಪ್ತರಾದ ಪುಟ್ಟಸ್ವಾಮಿ ಗೌಡ, ಅಳಿಯ ಬಂಗಾರು ಸೋಮಶೇಖರ ಹಾಗೂ ಕೆ. ಶೈಲಾ ಅವರು 2018 ರಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿಯೊಂದಿಗೆ ಕೈಜೋಡಿಸಿ ಗಣಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಗಣಿ ಅಕ್ರಮ ಹೋರಾಟಗಾರ ಟಪಾಲ್ ಗಣೇಶ ಇದರಿಂದ ತಿಳಿಯುತ್ತದೆ ಕರ್ನಾಟಕ-ಆಂಧ್ರ ಪ್ರದೇಶದ ಗಡಿ ಒತ್ತುವರಿ ಹಾಗೂ ಗಡಿ ಧ್ವಂಸ ಪ್ರಕರಣ ಸೇರಿ ಗಡಿಗುರುತು ಪುನರ್ ಸ್ಥಾಪಿಸುವ ಕಾರ್ಯ, ಎಲ್ಲೋ ಒಂದು ಕಡೆ ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಒತ್ತಡದ ಮೇರೆಗೆ ನಡೆಯುತ್ತಿದೆ ಎಂದರು.
ಹಿಂದ್ ಟ್ರೇಡರ್ಸ್ ಮೈನಿಂಗ್ ಕಂಪನಿಯ ಪರವಾನಗಿಯನ್ನೇ ರದ್ದುಪಡಿಸಲಾಗಿತ್ತು. ಲೋಕಾಯುಕ್ತ ವರದಿಯಲ್ಲೂ ಕೂಡ ಈ ಕಂಪನಿಯ ಹೆಸರು ಉಲ್ಲೇಖವಾಗಿತ್ತು. ಅಂತಹ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದು ಸಚಿವ ಈಶ್ವರಪ್ಪನವರಿಗೆ ಶೋಭೆ ತರುವಂತದ್ದಲ್ಲ ಎಂದು ಟಪಾಲ್ ಗಣೇಶ ವಾಗ್ದಾಳಿ ನಡೆಸಿದರು.