ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಮಹಾಮಳೆಗೆ ಪಶ್ಚಿಮ ತಾಲೂಕು ಭಾಗದ ಕೆಲವು ಭಾಗಶಃ ಬಿದ್ದಿದ್ರೇ, ಬಹುತೇಕ ಮನೆಗಳು ನೆಲಸಮಗೊಂಡಿವೆ.
2019-20ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸೋಗಿ ಗ್ರಾಮದ ನಿವಾಸಿ ವೈ.ಮಲ್ಲಪ್ಪ ಗವಾಯಿ ಅವರ ಮನೆ ಮಹಾಮಳೆಗೆ (ಮಣ್ಣಿನ ಮನೆಯೊಂದರ ಮೇಲ್ಛಾವಣಿ)ನೆಲಸಮಗೊಂಡಿದೆ.
ಸತತ ಐದು ದಶಕಗಳ ಕಾಲ ಪೂರ್ವಜರು ಜೀವಿಸಿರೋ ಈ ಮಣ್ಣಿನ ಮನೆ ಕುಸಿದಿದೆ. ಇದರಿಂದಾಗಿ ಇರಲು ಸ್ವಂತ ನೆಲೆ ಇಲ್ಲದೇ ವೈ ಮಲ್ಲಪ್ಪ ಗವಾಯಿ ಅವರ ಇಡೀ ಕುಟುಂಬ ಇದೀಗ ಬಾಡಿಗೆ ಮನೆಯಲ್ಲಿ ಆಶ್ರಯ ಪಡೆಯುವ ಸ್ಥಿತಿ ಇದೆ. ಅತ್ತ ಕಲೆಗಾರನಿಗೆ ಸರ್ಕಾರ ಪ್ರಶಸ್ತಿ ನೀಡಿದೆ. ಆದರೆ, ಈಗ ಅದೇ ಪ್ರಶಸ್ತಿ ಪುರಸ್ಕೃತ ಗವಾಯಿ ಅವರ ತಲೆಗೊಂದು ಸೂರೇ ಇಲ್ಲ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ವೈ.ಮಲ್ಲಪ್ಪ ಗವಾಯಿ ಅವರು, ಸತತ ಮಹಾಮಳೆಗೆ ನನ್ನ ಮನೆ ಕುಸಿದು ಬಿದ್ದಿದೆ. ಈ ಹಿಂದೆಯೇ ಅನೇಕ ಬಾರಿ ಆಶ್ರಯ ಮನೆ ಮಂಜೂರಾತಿ ಮಾಡುವಂತೆ ಕೋರಿ ಜಿಲ್ಲಾಡಳಿತ ಹಾಗೂ ಹೂವಿನಹಡಗಲಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ರೂ ಮನೆ ಮಂಜೂರಾತಿಗೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ.
ಈಗಲೂ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಸತಿ ಸಚಿವ ವಿ.ಸೋಮಣ್ಣ ಹಾಗೂ ಹಡಗಲಿ ಶಾಸಕ ಪಿ ಟಿ ಪರಮೇಶ್ವರ ನಾಯ್ಕ ಅವರಿಗೆ ಈ ಕುರಿತು ಮನವಿ ಮಾಡಿದ್ದು, ಆದಷ್ಟು ಬೇಗನೆ ಮನೆ ಮಂಜೂರಾತಿ ಮಾಡಿಕೊಡೋದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ರು.