ಬಳ್ಳಾರಿ:ಈ ಬಾರಿ ಇಡೀ ರಾಜ್ಯವನ್ನೇ ನಡುಗಿಸಿದನೆರೆಯ ನೆಪವೊಡ್ಡಿ ಮುಂದೂಡಲಾಗಿದ್ದ ಹಂಪಿ ಉತ್ಸವವನ್ನು ಜನವರಿ 10 ಮತ್ತು 11ರಂದು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಕಲ ತಯಾರಿ ನಡೆಸಿಕೊಂಡಿದೆ. ಶುಕ್ರವಾರ ಸಂಜೆ 7.30 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದು, ನಟ ಯಶ್ ಕೂಡ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಜಿಲ್ಲಾಡಳಿತದಿಂದ ನಾಲ್ಕು ವೇದಿಕೆಗಳನ್ನು ನಿರ್ಮಿಸಲಾಗಿದೆ. ಶ್ರೀಕೃಷ್ಣದೇವರಾಯ (ಗಾಯತ್ರಿ ಪೀಠ) ವೇದಿಕೆ, ಬಸವಣ್ಣ ವೇದಿಕೆ, ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆ, ಕಡಲೆಕಾಳು ಗಣಪ ವೇದಿಕೆಯ ತಯಾರಿಕಾರ್ಯ ಭರದಿಂದ ಸಾಗಿದೆ. ಮುಖ್ಯವೇದಿಕೆಯಲ್ಲಿ ಹಂಪಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡುವ ಹಿನ್ನೆಲೆಯಲ್ಲಿ ವಿಶೇಷ ಅತಿಥಿಗಳೂ ಸೇರಿದಂತೆ ಸಾರ್ವಜನಿಕರ ಗ್ಯಾಲರಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.
ಜ. 8ರಿಂದ 12ರವರೆಗೆ ಕಮಲಾಪುರ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಹಂಪಿ ಬೈಸ್ಕೈ (ಆಗಸದಲ್ಲಿ ಹಂಪಿ) ಏರ್ಪಡಿಸಲಾಗಿದೆ.
ಜ.10ರಿಂದ 11ರವರೆಗೆ ಬೆಳಗ್ಗೆ 9.30ರಿಂದ ಸಾಸುವೆಕಾಳು ಗಣಪ ಮುಂಭಾಗದಲ್ಲಿ ಸಾಹಸ ಕ್ರೀಡೆಗಳು ನಡೆಯಲಿವೆ. ಜ.11ರಂದು ಕಮಲಾಪುರ ಕೆರೆಯಲ್ಲಿ ಸಂಜೆ 4ಕ್ಕೆ ಪಾರಂಪರಿಕ ಸ್ಪರ್ಧೆ ಮತ್ತು ಮಾತಂಗ ಪರ್ವತ ಮೈದಾನದ ಆವರಣದಲ್ಲಿ ಮತ್ಸ್ಯಮೇಳ ಆಯೋಜಿಸಲಾಗಿದೆ. ಈ ಎರಡು ದಿನಗಳ ಕಾಲ ಹಂಪಿ ವಿರೂಪಾಕ್ಷ ದೇವಸ್ಥಾನದ ಮುಂಭಾಗದಲ್ಲಿ ರಂಗೋಲಿ, ಮೆಹಂದಿ ಪ್ರದರ್ಶನ ನಡೆಯಲಿದೆ.
ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಆರೋಗ್ಯ ಮತ್ತು ಸಚಿವರಾದ ಬಿ. ಶ್ರೀರಾಮುಲು ಹಾಗೂ ಸಚಿವ ಸಿ.ಟಿ. ರವಿ ಸೇರಿದಂತೆ ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರ ಶಾಸಕ ಅನಂದ್ ಸಿಂಗ್ ಉತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ.