ವಿಜಯನಗರ: ಜಿ-20 ಶೃಂಗಸಭೆಗೆ ಸಂಬಧಿಸಿದಂತೆ ವಿಶ್ವಪ್ರಸಿದ್ಧ ಹಂಪಿಯಲ್ಲಿ ಜುಲೈ ತಿಂಗಳ 3ನೇ ವಾರ ನಡೆಯಲಿರುವ ಕಾರ್ಯಕ್ರಮಗಳ ಸ್ಥಳಗಳ ಪರಿಶೀಲನೆಯನ್ನು ಉನ್ನತ ಮಟ್ಟದ ಅಧಿಕಾರಿಗಳು ನಡೆಸಿದರು.
ವಿಶ್ವಪಾರಂಪರಿಕ ಪ್ರದೇಶ ಹಂಪಿಯ ಚಕ್ರತೀರ್ಥ ಬಳಿಯ ನದಿದಂಡೆಯಲ್ಲಿ ಜಿ-20 ಸಭೆಗೆ ಆಗಮಿಸುವ ಪ್ರತಿನಿಧಿಗಳು ಕೈಗೊಳ್ಳಲಿರುವ ಹರಿಗೋಲು ಸವಾರಿಯ(ಕೊರಾಕಲ್ ರೈಡ್) ಪ್ರಾರಂಭಿಕ ಸ್ಥಳದ ಪರಿಶೀಲನೆ ನಡೆಸಿದರು. ಸುತ್ತಮುತ್ತಲಿನ ಪ್ರದೇಶದ ಮಾಹಿತಿಯನ್ನು ಸ್ಥಳೀಯ ಅಧಿಕಾರಿಗಳಿಂದ ಪಡೆದುಕೊಂಡರು. ಜಿ-20 ಶೆರ್ಪಾ ಅಮಿತಾಭ್ ಕಾಂತ್ ಸೇರಿದಂತೆ ಜಂಟಿ ಕಾರ್ಯದರ್ಶಿ ಆಶಿಶ್ ಸಿನ್ಹಾ, ಜಂಟಿ ಕಾರ್ಯದರ್ಶಿ (ಭದ್ರತೆ) ಭಾವನಾ ಸಕ್ಸೇನಾ, ಅಧೀನ ಕಾರ್ಯದರ್ಶಿ ಆಸಿಮ್ ಅನ್ವರ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮಪ್ರಸಾತ್ ಮನೋಹರ್ ವಿ. ಅವರು ಉಪಸ್ಥಿತರಿದ್ದರು.
ಜುಲೈ 9ರಿಂದ 16ರ ವರೆಗೆ ಜಿ 20 ಶೃಂಗಸಭೆ:ಈ ಬಾರಿ ಭಾರತ ಜಿ 20 ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದು, ಅತೀ ಮುಖ್ಯವಾದ ಜಿ 20 ಶೃಂಗಸಭೆಯ ಮೂರನೇ ಪ್ರಮುಖ ಸಭೆ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಜು 9 ರಿಂದ 16ರ ವರೆಗೆ ನಡೆಯಲಿದೆ ಎಂದು ಜಿ 20 ಶೆರ್ಪಾದ ಅಮಿತಾಭ್ ಕಾಂತ್ ತಿಳಿಸಿದರು.
ಪೂರ್ವ ಸಿದ್ದತಾ ಸಭೆಯ ಮುನ್ನ ಭಾರತದ ಜಿ 20 ಉನ್ನತ ಮಟ್ಟದ ಅಧಿಕಾರಿಗಳ ತಂಡ ಬೆಳಗ್ಗೆ ವಿಶ್ವವಿಖ್ಯಾತ ಹಂಪಿಗೆ ತೆರಳಿ ಜಿ-20 ಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳು ಭೇಟಿ ನೀಡಲಿರುವ ಸ್ಥಳಗಳ ಪರಿಶೀಲನೆ ಕೈಗೊಂಡು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜಾಗತಿಕ ಮಟ್ಟದ ಒಟ್ಟು ಜಿ 20 ಶೃಂಗಸಭೆಯ 20 ಸದಸ್ಯ ರಾಷ್ಟ್ರಗಳು, 9 ಆಹ್ವಾನಿತ ರಾಷ್ಟ್ರಗಳು ಸೇರಿದಂತೆ ಒಟ್ಟು 43 ರಾಷ್ಟ್ರಗಳು ಈ ಸಭೆಯಲ್ಲಿ ಭಾಗವಹಿಸಲಿವೆ.