ಬಳ್ಳಾರಿ, ವಿಜಯನಗರ: ಇಲ್ಲಿಯವರೆಗೆ ಬಿ.ಎಸ್ ಯಡಿಯೂರಪ್ಪ ಅವರನ್ನು ಬಳಸಿಕೊಂಡ ಬಿಜೆಪಿ ಈಗ ಅವರನ್ನು ಹೊರ ಹಾಕಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಹೊಸಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಪರ ಮಾತನಾಡುತ್ತಲೇ ಬಿಜೆಪಿಯನ್ನು ತೆಗಳಿದ್ದಾರೆ.
ಮಾಜಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ಯಡಿಯೂರಪ್ಪ ಅವರಿಗೆ ವಯಸ್ಸಾಯ್ತು ಎಂಬುದು ಸರಿಯಲ್ಲ. ಅವರ ಕೆಲಸ ಗಮಮಿಸಬೇಕು. ಬಿಎಸ್ವೈ ಅವರನ್ನು ಸೈಡ್ ಲೈನ್ ಮಾಡುತ್ತಿರೋದನ್ನು ಇಡೀ ಕರ್ನಾಟಕದ ಜನರು ನೋಡುತ್ತಿದ್ದಾರೆ. ರಾಜಕಾರಣದಲ್ಲಿ ವಯಸ್ಸು ಮುಖ್ಯ ಅಲ್ಲ. ಅವರು ಈಗಲೂ ಮತ ತರುವಂತಹ ಶಕ್ತಿ ಹೊಂದಿದ್ದಾರೆ. ಪುತ್ರ ವಿಜಯೇಂದ್ರ ಅವರಿಗೆ ತಮ್ಮ ಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ. ಆದರೆ ಅವರ ಪಕ್ಷವು ವಿಜಯೇಂದ್ರ ಅವರಿಗೆ ಟಿಕೆಟ್ ನೀಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ವಿಜಯೇಂದ್ರ ನನಗೆ ಒಳ್ಳೆಯ ಸ್ನೇಹಿತ, ಅವರಿಗೆ ಒಳ್ಳೆಯದಾಗಲಿ ಎಂದು ಸಂತೋಷ್ ಲಾಡ್ ಹೇಳಿದರು.
ಹೋರಾಟದ ಎಚ್ಚರಿಕೆ: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿಮಲೈನ ಎನ್‍ಎಂಡಿಸಿಯು ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿಲ್ಲ. ನಮ್ಮ ಬೇಡಿಕೆ ಪರಿಗಣಿಸಿದಿದ್ದರೆ ಎನ್‍ಎಂಡಿಸಿ ರಸ್ತೆಯ ಮೇಲೆ ನಾನೇ ಮಲಗಿ ಹೋರಾಟ ಮಾಡುತ್ತೇನೆ ಎಂದು ಸಂತೋಷ್ ಲಾಡ್ ಎಚ್ಚರಿಕೆ ರವಾನಿಸಿದರು.
ಸ್ಥಳೀಯರಿಗೆ ಉದ್ಯೋಗ:ಇತ್ತೀಚೆಗೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿರುವಂತಹ ಎನ್‍ಎಂಡಿಸಿ 150 ಹುದ್ದೆಗಳಲ್ಲಿ 87 ಹುದ್ದೆಗಳನ್ನು ಸ್ಥಳೀಯರಿಗೆ ನೀಡಬೇಕೆಂಬ ನಿಯಮ ಇದ್ದರೂ ಕೂಡ ಉತ್ತರ ಭಾರತೀಯರನ್ನು ನೇಮಕ ಮಾಡಿದೆ. ನಾನು ಕಾರ್ಮಿಕ ಸಚಿವನಾಗಿದ್ದಾಗ ಸಿ ಮತ್ತು ಡಿ ಕೆಟಗರಿಯಲ್ಲಿ ನೂರರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಕಾನೂನು ಮಾಡಲಾಗಿದೆ. ಈ ಬಗ್ಗೆ ನಿಯಮವಿದೆ ಎಂದು ಹೇಳಿದ ಅವರು, 10 ವರ್ಷಗಳಿಂದ ರಾಜ್ಯದಲ್ಲಿ ವಾಸವಾಗಿ, ಕನ್ನಡ ಮಾತನಾಡಲು ಮತ್ತು ಓದಲು, ಬರೆಯಲು ಬರುವವರನ್ನೇ ಕನ್ನಡಿಗರು ಎಂದು ಪರಿಗಣಿಸಿ ಉದ್ಯೋಗ ನೀಡಬೇಕೆಂಬ ನಿಯಮ ಮಾಡಲಾಗಿದೆ ಎಂದರು.
ಇದನ್ನೂ ಓದಿ:ಹುಬ್ಬಳ್ಳಿ ಸ್ಪಾರ್ಕರ್ ಫ್ಯಾಕ್ಟರಿ ಅಗ್ನಿ ಅವಘಡ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ
ಸಾರ್ವಜನಿಕ ಪ್ರಕಟಣೆ ಹೊರಡಿಸಿ ಸ್ಥಳೀಯರ ನೇಮಕಾತಿಗೆ ಮುಂದಾಗಬೇಕು. ಒಂದು ವೇಳೆ ಸ್ಥಳೀಯರು ಬಾರದಿದ್ದಲ್ಲಿ ಹೊರಗಡೆ ನೇಮಿಸಬಹುದೆಂಬ ನಿಯಮವು ಇದೆ. ಆದರೆ ಈ ವಿಚಾರವನ್ನು ಎನ್‍ಎಂಡಿಸಿಯು ಗಾಳಿಗೆ ತೂರಿದೆ ಎಂದು ಆರೋಪಿಸಿದ ಸಂತೋಷ್ ಲಾಡ್, ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಸಂಖ್ಯೆ ಸೇರಿದಂತೆ ಇತರೆ ಮಾಹಿತಿಯನ್ನು ಕೇಳಿದರೂ ಕೂಡ ಕೊಡುತ್ತಿಲ್ಲ. ಈ ವಿಚಾರವಾಗಿ ಎನ್‍ಎಂಡಿಸಿ ನಿರ್ದೇಶಕರೊಂದಿಗೆ ಮಾತನಾಡುತ್ತೇನೆ. ಒಂದು ವೇಳೆ ಸ್ಪಂದಿಸದಿದ್ದರೆ ಹೋರಾಟದ ದಾರಿ ತುಳಿಯುತ್ತೇವೆ ಎಂದು ಹೇಳಿದರು.