ಬಳ್ಳಾರಿ: ಮೇ 13ರಂದು ಈಟಿವಿ ಭಾರತ ಬಳ್ಳಾರಿಯ ಉಪ ಕಾಲುವೆಯಲ್ಲಿ ರಾಶಿ ರಾಶಿ ತ್ಯಾಜ್ಯ... ಜನರಿಗೆ ನರಕಯಾತನೆ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿತ್ತು. ಆ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದ ಜಲ ಸಂಪನ್ಮೂಲ ಇಲಾಖೆಯು ಉಪ ಕಾಲುವೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದೆ.
ಈಟಿವಿ ಭಾರತ ಫಲಶ್ರುತಿ: ತಾಳೂರು ರಸ್ತೆಯ ಬಲದಂಡೆ ಉಪ ಕಾಲುವೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ - kannadanews
ಬಳ್ಳಾರಿ ಜಿಲ್ಲೆ ತಾಳೂರು ರಸ್ತೆಯ ಬಲದಂಡೆ ಉಪ ಕಾಲುವೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಜಲ ಸಂಪನ್ಮೂಲ ಇಲಾಖೆ ಕೊನೆಗೂ ಚಾಲನೆ ನೀಡಿದೆ.
ಉಪ ಕಾಲುವೆ ಎಡ ಮತ್ತು ಬಲ ಬದಿಯಲ್ಲಿ ವಾಸಿಸುತ್ತಿರುವ ನಿವಾಸಿಗಳ ಓಡಾಟಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾರ್ಯವನ್ನು ಶುರು ಮಾಡಲಾಗಿದೆ. ಜೆಸಿಬಿ ಯಂತ್ರೋಪಕರಣ ಸಹಾಯದೊಂದಿಗೆ ಮೂರು ಕಡೆಗಳಲ್ಲಿ ಮೇಲ್ಸೆತುವೆ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಕರೆಯಲಾಗಿದೆ. ಉಪ ಕಾಲುವೆಯಲ್ಲಿ ತುಂಬಿದ್ದ ತ್ಯಾಜ್ಯದ ರಾಶಿಯನ್ನೂ ಕೂಡ ಶುಚಿಗೊಳಿಸಲಾಗಿದೆ. ತೆರೆದ ಉಪ ಕಾಲುವೆಯಲ್ಲಿ ಚರಂಡಿ ನೀರು ಸಂಗ್ರಹವಾಗಿದೆ. ಆ ನೀರನ್ನು ಹೊರ ಬಿಡುವ ಕಾರ್ಯವೂ ಹಂತ ಹಂತವಾಗಿ ನಡೆಯಲಿದೆ.
ತುಂಗಭದ್ರಾ ಜಲಾಶಯದ ಉಪ ಕಾಲುವೆ ಈಗ ರಾಜಕಾಲುವೆಯಾಗಿ ಮಾರ್ಪಾಡಾಗಿತ್ತು. ನಗರದ ಅವಂಬಾವಿ, ತಾಳೂರು ರಸ್ತೆ, ಶ್ರೀನಗರ, ಭಗತ್ ಸಿಂಗ್ ನಗರ, ಕಪ್ಪಗಲ್ಲು ರಸ್ತೆಯ ಕೊಳಚೆ ಪ್ರದೇಶ, ಸಿದ್ಧಾರ್ಥ ಕಾಲೋನಿ ಕೊಳಚೆ ಪ್ರದೇಶದ ಮೂಲಕ ಸಂಗನಕಲ್ಲು ಅಡ್ಡ ರಸ್ತೆಯವರೆಗೆ ಬರೀ ತ್ಯಾಜ್ಯದ ರಾಶಿಯೇ ತುಂಬಿಕೊಂಡಿತ್ತು. ಇದೀಗ ಜಲ ಸಂಪನ್ಮೂಲ ಇಲಾಖೆಯು ಉಪ ಕಾಲುವೆ ಶುಚಿತ್ವ ಕಾರ್ಯಕ್ಕೆ ಕೈಹಾಕಿರೋದು ಅಲ್ಲಿನ ನಿವಾಸಿಗಳ ಮೊಗದಲ್ಲಿ ಸಂತಸ ಮೂಡಿಸಿದೆ.