ಬಳ್ಳಾರಿ: ಐಸಿಯುಗೆ ವಿದ್ಯುತ್ ಸರಬರಾಜಾಗುವ ಕೇಬಲ್ ಬ್ಲಾಸ್ಟ್ ಆಗಿರುವುದರಿಂದ ಈ ಸಮಸ್ಯೆಯಾಗಿದೆ. ಆದರೆ ರೋಗಿಗಳಿಗೆ ತೊಂದರೆಯಾಗದಂತೆ ಟ್ರಾಮ್ ಕೇರ್ ಸೆಂಟರ್ ಮತ್ತು ನ್ಯೂ ಓಟಿ ಬ್ಲಾಕ್ನಲ್ಲಿ ವೆಂಟಿಲೇಟರ್ ಇವೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಹೇಳಿದ್ದಾರೆ.
ವಿಮ್ಸ್ನಲ್ಲಿ ವಿದ್ಯುತ್ ಕೈ ಕೊಟ್ಟಿದ್ದರಿಂದಲೇ ವೆಂಟಿಲೇಟರ್ ಇಲ್ಲದೇ ಇರುವುದರಿಂದ ಮನೋಜ್ ಮೃತಪಟ್ಟಿದ್ದಾನೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಸಿ ಪವನ್ ಕುಮಾರ್ ಮಾಲಪಾಟಿ ಈ ಸ್ಪಷ್ಟನೆ ನೀಡಿದ್ದಾರೆ.
ಇಂದು ಸಂಜೆ ವಿಮ್ಸ್ನಲ್ಲಿ ಐಸಿಯುಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿರುವ ಜನರೇಟರ್ ಹಳೆಯದಾಗಿರುವುದರಿಂದ ಈ ರೀತಿಯ ಸಮಸ್ಯೆಯಾಗಿದೆ. ಮೊನ್ನೆ ಸಂಜೆ ಟ್ರಾನ್ಸ್ಫಾರ್ಮರ್ ಸಮಸ್ಯೆ ಬಗ್ಗೆ ನಿರ್ದೇಶಕರು ನನ್ನ ಗಮನಕ್ಕೆ ತಂದಿದ್ದರು. ಕೂಡಲೇ ಚರ್ಚೆ ಮಾಡಿ 500 ಕೆವಿ ಜನರೇಟರ್ ವ್ಯವಸ್ಥೆ ಮಾಡುತ್ತಿದ್ದೇವೆ. ಜನರೇಟರ್ಗೂ ಮತ್ತು ಈ ಪ್ರಕರಣಕ್ಕೆ ಸಂಬಂಧವೇ ಇಲ್ಲ ಎಂದು ತಿಳಿಸಿದರು.
ಈಗಾಗಲೇ ಬಾಡಿಗೆ ಜನರೇಟರ್ನಲ್ಲಿಯೇ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಜನರೇಟರ್ ಆನ್ ಮಾಡಿದರೂ, ಕೇಬಲ್ ಬ್ಲಾಸ್ಟ್ ಆಗಿರುವುದರಿಂದ ಸಮಸ್ಯೆಯಾಗುತ್ತದೆ. ಐಸಿಯುನಲ್ಲಿ ಎರಡು ಕೇಬಲ್ ವ್ಯವಸ್ಥೆ ಮಾಡಬೇಕು. ಜೆಸ್ಕಾಂ ಅವರ ಪ್ರಕಾರ, ಇದು ಸುಮಾರು 40 ವರ್ಷಗಳಷ್ಟು ಹಳೆಯದು ಆಗಿರುವುದರಿಂದ ಲೈನ್ ಇಂಟರ್ಲಿಂಗ್ ಆಗಿರಬಹುದೆಂದು ಹೇಳುತ್ತಿದ್ದಾರೆ ಎಂದರು.