ವಿಜಯನಗರ:ರಾಜ್ಯದ 31ನೇ ಜಿಲ್ಲೆಯಾಗಿ ರಚನೆಯಾದ ವಿಜಯನಗರ ಜಿಲ್ಲೆ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸಿತ್ತು.
ಕಳೆದ ಎರಡು ವರ್ಷದ ಹಿಂದೆ ವಿಜಯನಗರ ಜಿಲ್ಲೆ ರಚನೆಗಾಗಿ ಆನಂದ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನಂತರ ಮತ್ತೆ ಮರು ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ತಮ್ಮ ಬೇಡಿಕೆಯಂತೆ ಹೊಸ ಜಿಲ್ಲೆ ರಚನೆಯಾಯಿತು. ಇದಕ್ಕೆ ಇಲ್ಲಿನ 5 ಕ್ಷೇತ್ರಗಳ ಶಾಸಕರು ಕೂಡ ಬೆಂಬಲ ನೀಡಿದ್ದರು.
ನೂತನ ಜಿಲ್ಲೆ ರಚನೆಯಾಗಲು ಕಾರಣೀಕರ್ತರಾದ ಆನಂದ್ ಸಿಂಗ್ ಅವರು 2008ರಿಂದ ಸತತವಾಗಿ ನಾಲ್ಕು ಬಾರಿ ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಬಾರಿ ತನ್ನ ಮಗ ಸಿದ್ದಾರ್ಥ ಸಿಂಗ್ಗಾಗಿ ಕ್ಷೇತ್ರ ತ್ಯಾಗ ಮಾಡಿದರು. ಆದರೆ ಸಿದ್ದಾರ್ಥ ಸಿಂಗ್ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದಾರೆ. ಇನ್ನು ವಿಜಯನಗರ ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ತಲಾ ಒಂದೊಂದು ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಎಲ್ಲರೂ ಜಿಲ್ಲೆಗೆ ಹೊಸಬರು:ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್.ಆರ್. ಗವಿಯಪ್ಪ ಹಾಗೂ ನೇಮಿರಾಜ್ ನಾಯ್ಕ ಅವರು ಮಾಜಿ ಶಾಸಕರು. ಆದರೆ ನೂತನ ಜಿಲ್ಲೆ ಆದ ನಂತರ ಇದ್ದ ಮೂವರು ಶಾಸಕರಾದ ಕರುಣಾಕರ ರೆಡ್ಡಿ, ಪಿ.ಟಿ. ಪರಮೇಶ್ವರ ನಾಯ್ಕ ಹಾಗೂ ಭೀಮಾನಾಯ್ಕ ಸೋಲನ್ನು ಕಂಡಿದ್ದಾರೆ. ಇನ್ನು ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮಗನಿಗೆ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಕೂಡ್ಲಿಗಿ ಕ್ಷೇತ್ರ ವೈ. ಗೋಪಾಲ ಕೃಷ್ಣ ಅವರು ಕ್ಷೇತ್ರ ಬದಲಿಸಿದ್ದಾರೆ. ಹಗರಿಬೊಮ್ಮನಹಳ್ಳಿ ಹಾಗೂ ಹೂವಿನಹಡಗಲಿ, ಹರಪನಹಳ್ಳಿಯಲ್ಲಿ ಹೊಸಬರಿಗೆ ಮಣೆ ಹಾಕಿದ್ದಾರೆ.
ವಿಜಯನಗರ ವಿಧಾನಸಭಾ ಕ್ಷೇತ್ರ:ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ವಿರುದ್ಧಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಆರ್. ಗವಿಯಪ್ಪ 33,723 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.