ಕರ್ನಾಟಕ

karnataka

ETV Bharat / state

ಕುಂದಾನಗರಿಯ ಭಿಕ್ಷುಕರಿಗೆ ನೆರವಾದ ಯುವಕರು.. ಲಾಕ್​ಡೌನ್​ನಲ್ಲಿ ನಿರ್ಗತಿಕರಿಗೆ ಮರುಜೀವ - ಆಹಾರ ಕಿಟ್

ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆ ಬದಿಯಲ್ಲೇ ವಾಸ್ತವ್ಯ ಹೂಡಿ ಹಲವು ವರ್ಷಗಳಿಂದ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದ 8ಕ್ಕೂ ಹೆಚ್ಚು ಭಿಕ್ಷುಕರು ಹಾಗೂ ಮಾನಸಿಕ ಅಸ್ವಸ್ಥರನ್ನು ಸೇವಾ ಫೌಂಡೇಶನ್ ವೆಲ್ಫೆರ್ ಟ್ರಸ್ಟ್​ನ ಯುವಕರು ಸ್ಥಳಾಂತರ ಮಾಡಿ, ಅವರಿಗೆ ಮರುಜೀವನ ನೀಡುವ ಕಾರ್ಯ ಮಾಡಿದ್ದಾರೆ.

youths-of-belgavi-city-helps-beggars-at-lockdown-time
ಲಾಕ್​ಡೌನ್​ನಲ್ಲಿ ನಿರ್ಗತಿಕರಿಗೆ ಮರುಜೀವ

By

Published : Jul 1, 2021, 5:59 AM IST

ಬೆಳಗಾವಿ: ಮಹಾಮಾರಿ ಕೊರೊನಾ ಹೊಡೆತಕ್ಕೆ ಎಲ್ಲ ವರ್ಗದ ಜನರು ನಲುಗಿದ್ದಾರೆ. ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್‍ಡೌನ್, ಜನತಾ ಕರ್ಫ್ಯೂ ಸಹ ಜಾರಿ ಮಾಡಿತ್ತು. ಅನಗತ್ಯವಾಗಿ ಜನರು ಓಡಾಡದೇ ಮನೆಯಲ್ಲೇ ಉಳಿಯುವಂತಾಗಿತ್ತು. ಇದರಿಂದ ದಾನಿಗಳಿಲ್ಲದೇ ಬೀದಿಬದಿಯಲ್ಲೇ ಜೀವನ ನಡೆಸುತ್ತಿರುವ ಭಿಕ್ಷುಕರು, ಮಾನಸಿಕ ಅಸ್ವಸ್ಥರ ಬದುಕಿನ ಬವಣೆ ಯಾರಿಗೂ ಬೇಡ ಎಂಬಂತಾಗಿತ್ತು. ಬೀದಿ ಬದಿಯಲ್ಲಿದ್ದ ಭಿಕ್ಷುಕರು, ಮಾನಸಿಕ ಅಸ್ವಸ್ಥರ ಬಾಳಿಗೆ ಕುಂದಾನರಿಯ ಯುವಕರ ತಂಡ ಇದೀಗ ಬೆಳಕಾಗಿದೆ.

ಕುಂದಾನಗರಿಯ ಭಿಕ್ಷುಕರಿಗೆ ನೆರವಾದ ಯುವಕರು

ಕೊರೊನಾದಿಂದ ಕೆಳವರ್ಗದ ಜನರ ಬದುಕು ಶೋಚನೀಯವಾಗಿದೆ. ಕೆಲಸ ಕಳೆದುಕೊಂಡು ಹಲವರು ಒಂದು ಹೊತ್ತಿನ ಊಟಕ್ಕೂ ಜನರು ಪರದಾಡುವ ಸ್ಥಿತಿ ಬಂದೊದಗಿತ್ತು. ಇಂಥ ಜನರ ನೆರವಿಗೆ ಬೆಳಗಾವಿಯ ಸೇವಾ ಫೌಂಡೇಶನ್ ವೆಲ್​ಫೇರ್ ಟ್ರಸ್ಟ್​ನ ಯುವಕರು ಧಾವಿಸಿದ್ದಾರೆ. ಬಡ ಹಾಗೂ ಕಾರ್ಮಿಕ ಕುಟುಂಬಗಳಿಗೆ ದಿನಸಿ ಹಾಗೂ ಫುಡ್ ಪಾಕೇಟ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಯುವಕರ ಕಾರ್ಯಕ್ಕೆ ಸ್ಥಳೀಯರು ಸಹ ಕೈ ಜೋಡಿಸಿದ್ದು, ಸಾರ್ವಜನಿಕರ ನೆರವು ಪಡೆದು ಸೇವಾ ಫೌಂಡೇಶನ್ ಸದಸ್ಯರು ಬಡವರ್ಗದ ಜನರಿಗೆ ನೆರವಾಗಿದ್ದಾರೆ.

ಎಲ್ಲರಿಗೂ ಕೋವಿಡ್ ಪರೀಕ್ಷೆ

ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆ ಬದಿಯಲ್ಲೇ ವಾಸ್ತವ್ಯ ಹೂಡಿ ಹಲವು ವರ್ಷಗಳಿಂದ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದ 8ಕ್ಕೂ ಹೆಚ್ಚು ಭಿಕ್ಷುಕರು ಹಾಗೂ ಮಾನಸಿಕ ಅಸ್ವಸ್ಥರನ್ನು ಸೇವಾ ಫೌಂಡೇಶನ್ ವೆಲ್ಫೆರ್ ಟ್ರಸ್ಟ್​ನ ಯುವಕರು ಸ್ಥಳಾಂತರ ಮಾಡಿದ್ದಾರೆ. ಫೌಂಡೇಶನ್ ಯುವಕರೇ ಬೀದಿಬದಿಯಿಂದ ಕರೆತಂದು ಸ್ನಾನ ಮಾಡಿಸಿ ಹೊಸ ಬಟ್ಟೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಅಲ್ಲದೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಕೋವಿಡ್ ಟೆಸ್ಟ್ ಕೂಡ ಮಾಡಿಸಿದ್ದಾರೆ. ಯಾರಲ್ಲೂ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಆದರೆ ಮೂವರಿಗೆ ಕಾಲು ನೋವಿನ ಸಮಸ್ಯೆ ಇದ್ದ ಕಾರಣ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ. ಬೀದಿ ಬದಿಯಲ್ಲಿದ್ದ ಮಾನಸಿಕ ಅಸ್ವಸ್ಥರು ಹಾಗೂ ಭಿಕ್ಷುಕರು ಇದೀಗ ಆಶ್ರಮದಲ್ಲಿ ನೆಲೆಸಿದ್ದಾರೆ.

ಕಳೆದ ವರ್ಷ ಕೂಡ ಕೊರೊನಾ ವಾರಿಯರ್ಸ್​ಗಳಿಗೆ ಹಾಗೂ ಸ್ಲಮ್ ಪ್ರದೇಶಗಳಿಗೆ ಭೇಟಿ ನೀಡಿ 10 ಸಾವಿರಕ್ಕೂ ಅಧಿಕ ಜನರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ್ದರು. ಈ ವರ್ಷ ಸ್ನೇಹಿತರೆಲ್ಲರೂ ಹಣ ಸೇರಿಸಿ ಬಡವರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಯುವಕರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಕೊರೊನಾ ಕಾರ್ಮೋಡದ ನಡುವೆ ಮಾನವೀಯತೆಯ ದೀಪ ಹಚ್ಚಿ ನಿರ್ಗತಿಕರ ಬಾಳಿಗೆ ಬೆಳಗಾವಿಯ ಯುವಕರು ಬೆಳಕಾಗಿದ್ದಾರೆ.

ABOUT THE AUTHOR

...view details