ಬೆಳಗಾವಿ: ದುಷ್ಕರ್ಮಿಗಳು ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದ ಜೈನ ಇಂಜಿನಿಯರಿಂಗ್ ಕಾಲೇಜಿನ ಹಿಂಭಾಗದಲ್ಲಿ ನಡೆದಿದೆ. ಪೀರನವಾಡಿ ಗ್ರಾಮದ ಅರ್ಬಾಜ್ ರಫಿಕ್ ಮುಲ್ಲಾ (25) ಕೊಲೆಗೀಡಾದ ವ್ಯಕ್ತಿ. ಘಟನೆಯಿಂದ ಕಾಲೇಜು ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಗುರುವಾರ ರಾತ್ರಿ ಎಂಜಿನಿಯರಿಂಗ್ ಕಾಲೇಜು ಹಿಂಭಾಗದ ಆವರಣದಲ್ಲಿ ಕುಡಿದ ಮತ್ತಿನಲ್ಲಿ ಕೆಲ ಯುವಕರು ಹೊಡೆದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಯುವಕನ ಕೊಲೆಯಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗಾಂಜಾ ಇಲ್ಲವೇ ಸಾರಾಯಿ ಕುಡಿದ ನಶೆಯಲ್ಲಿ ಗಲಾಟೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೊಲೆ ನಡೆದ ಸ್ಥಳಕ್ಕೆ ಡಿಸಿಪಿ ಶೇಖರ್ ಎಚ್.ಟಿ. ಮತ್ತು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಸ್ಥಳ ಪರೀಕ್ಷೆ ನಡೆಸಿದ್ದಾರೆ. ಕೊಲೆ ಮಾಡಿದ್ದು ಯಾರು ಮತ್ತು ಯಾವಾಗ..? ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ತನಿಖೆ ಬಳಿಕವೇ ಗೊತ್ತಾಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಮಚ್ಚು ಬೀಸಿದ ಆರೋಪಿಗಳ ಬಂಧನ:ಕಳೆದ ಸೋಮವಾರ (ಜುಲೈ 10) ಶಿವಮೊಗ್ಗಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮಚ್ಚು ಬೀಸಿದ ಪ್ರಕರಣ ಸಂಬಂಧ ಚೋರ್ ಸಮೀರ್ ಸೇರಿ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದಲ್ಲಿ ಸೋಮವಾರ ಜೀವಿತ್, ಅಪ್ರೋಜ್, ಸಾದೀಕ್ ಮತ್ತು ರಾಘವೇಂದ್ರ ಅವರ ಸ್ನೇಹಿತ ವಿಷ ಸೇವನೆ ಮಾಡಿದ್ದ. ಆತನನ್ನು ತೀರ್ಥಹಳ್ಳಿ ಜಯ ಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಿದ್ದರು.
ನಂತರ ನಾಲ್ವರು ಆಸ್ಪತ್ರೆ ರಸ್ತೆಯಲ್ಲಿರುವ ಬಾರ್ಗೆ ಕುಡಿಯಲು ಹೋಗಿದ್ದರು. ಈ ವೇಳೆ, ಅದೇ ಬಾರ್ಗೆ ಚೋರ್ ಸಮೀರ್ ತನ್ನ ಸ್ನೇಹಿತರೊಂದಿಗೆ ಬಂದಿದ್ದ. ಕುಡಿದ ಮತ್ತಿನಲ್ಲಿ ಅಪ್ರೋಜ್ಗೆ ಮನಬಂದಂತೆ ಬೈದಿದ್ದ. ಆಗ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಎಲ್ಲರನ್ನು ಚದುರಿಸಿದ್ದರು. ಬಳಿಕ ಸಂಜೆ ವೇಳೆಗೆ ಅಪ್ರೋಜ್ ಮತ್ತು ಗೆಳೆಯರು ತೀರ್ಥಹಳ್ಳಿಯ ಆಗುಂಬೆ ಸರ್ಕಲ್ ಬಳಿ ಬಾರ್ಗೆ ಕುಡಿಯಲು ಹೋದಾಗಲೂ ಅಪ್ರೋಜ್, ಚೋರ್ ಸಮೀರ್ಗೆ ಪೋನ್ ಮಾಡಿದ್ದು ಪರಸ್ಪರ ಬೈದಾಡಿಕೊಂಡಿದ್ದರು. ಕೆಲ ಸಮಯದ ನಂತರ ಬಾರ್ ಬಳಿಯೇ ಚೋರ್ ಸಮೀರ್ ಬಂದಿದ್ದು, ಅಲ್ಲಿಯೂ ಮತ್ತೆ ಗಲಾಟೆ ಆಗಿತ್ತು. ಆಗಲೂ ಪೊಲೀಸರು ಮಧ್ಯ ಪ್ರವೇಶಿಸಿ ಎಲ್ಲರನ್ನು ಓಡಿಸಿದ್ದರು.
ಅಲ್ಲಿಂದ ತೆರಳಿದ ಅಪ್ರೋಜ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಪುನಃ ವಾಪಸ್ ಬಂದು ಸಮೀರ್ ಅಪ್ರೋಜ್ ಮೇಲೆ ಮಚ್ಚು ಬೀಸಿದ್ದ. ಇದರಿಂದ ಅಪ್ರೋಜ್ ಹಾಗೂ ಜೀವಿತ್ಗೆ ಗಾಯವಾಗಿತ್ತು. ಗಾಯಗೊಂಡವರು ನೀಡಿದ ದೂರಿನ ಮೇರೆಗೆ ಚೋರ್ ಸಮೀರ್, ಸಫನ್ ಹಾಗೂ ಇತರ ನಾಲ್ವರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂಓದಿ:ರಾಯಚೂರು: ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆ