ಬೆಳಗಾವಿ:ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುತ್ತೇವೆ. ಆದರೆ ಲಾಕ್ಡೌನ್ ಜಾರಿಗೊಳಿಸುವ ಉದ್ದೇಶ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಸೆಮಿ ಲಾಕ್ಡೌನ್ ಘೋಷಣೆ ಆಗಿರುವ ಬಗ್ಗೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ಡೌನ್ ಘೋಷಣೆ ಮಾಡುವುದಿಲ್ಲ. ಗಡಿ ಭಾಗಗಳಲ್ಲಿ ಹೆಚ್ಚಿನ ಭದ್ರತೆಗೆ ನಿರ್ದೇಶನ ನೀಡಲಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆದರೆ ರಾಜ್ಯದಲ್ಲಿ ಲಾಕ್ಡೌನ್ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದರು.
ಮಹಾರಾಷ್ಟ್ರದಿಂದ ಕಳ್ಳದಾರಿ ಮೂಲಕ ರಾಜ್ಯ ಪ್ರವೇಶದ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದೇವೆ. ಗಡಿ ಭಾಗದಲ್ಲಿ ಚೆಕ್ ಫೋಸ್ಟ್ ತೆರೆಯಲಾಗಿದೆ. ಕಳ್ಳದಾರಿಯಿಂದ ಬರುವವರ ಮೇಲೆ ನಿಗಾ ಇಡುತ್ತೇವೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ವೈ ಸಿದ್ದುಗೆ ಸಿಎಂ ತಿರುಗೇಟು
ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಯಡಿಯೂರಪ್ಪ ತಿರುಗೇಟು ನೀಡಿದರು. ರಾಜ್ಯದಲ್ಲಿ ಎಲ್ಲಾ ವರ್ಗಗಳ ಜನರ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ. ನೇಕಾರರು, ರೈತರ ಅಭಿವೃದ್ಧಿಗೆ ವಿಶೇಷ ಕಾಳಜಿ ಹೊಂದಿದೆ. ಬೆಳಗಾವಿ ಸೇರಿ ಮೂರು ಕ್ಷೇತ್ರಗಳಲ್ಲಿ ಒಳ್ಳೆಯ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಎಲ್ಲಾ ಕಡೆಯೂ ಉತ್ತಮ ವಾತಾವರಣ ಇದೆ. ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ದಾಖಲಿಸಲಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಇದನ್ನೂ ಓದಿ.. ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ನಾಳೆ 5 ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರ