ಕರ್ನಾಟಕ

karnataka

ETV Bharat / state

ಬರೀ 27 ಮಕ್ಕಳಿಗೆ 10 ಶಿಕ್ಷಕರಿಂದ ಪಾಠ.. ಗಡಿ ಶಾಲೆಗಳಿಗೆ ಗಂಡಾಂತರ ತಪ್ಪೋದ್ಯಾವಾಗ!? - ವಿದ್ಯಾರ್ಥಿಗಳಿಗಾಗಿ ಕಾದು ನಿಂತ ಶಿಕ್ಷಕಿಯರು

ನಮಗೂ ಸರ್ಕಾರಿ ಶಾಲೆ ಉಳಿಸಿ ಬೆಳೆಸಬೇಕು ಎನ್ನೋ ಆಸೆಯಿದೆ. ಹಾಗಾಗಿ, ಸ್ಥಳೀಯರ ಮನೆಗಳಿಗೆ ಅಲೆದಾಡಿ, ವಿಶೇಷ ಅಭಿಯಾನ ನಡೆಸುತ್ತಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ಸೌಲಭ್ಯ ತಿಳಿಸಿದರೂ ಮಕ್ಕಳು ಬರುತ್ತಿಲ್ಲ..

belgavi
ವಿದ್ಯಾರ್ಥಿಗಳ ಬರುವಿಕೆಗೆ ಕಾದು ನಿಂತ ಶಿಕ್ಷಕಿಯರು

By

Published : Sep 21, 2021, 9:42 PM IST

ಬೆಳಗಾವಿ :ಸಾಮಾನ್ಯವಾಗಿ ಶಾಲೆಗಳಲ್ಲಿಶಿಕ್ಷಕರ ಕೊರತೆ ಇದೆ ಎಂದು ಕೇಳಿರುತ್ತೇವೆ. ಆದರೆ, ಬೆಳಗಾವಿ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಮಕ್ಕಳ ದಾಖಲಾತಿಗಿಂತ ಶಿಕ್ಷಕರ ಸಂಖ್ಯೆಯೇ ಹೆಚ್ಚಾಗಿದೆ. ನಗರದ ಒಂದೇ ಪ್ರದೇಶದಲ್ಲಿನ ನಾಲ್ಕು ಶಾಲೆಗಳಲ್ಲಿ 27ವಿದ್ಯಾರ್ಥಿಗಳಿಗೆ 10 ಜನ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

27 ವಿದ್ಯಾರ್ಥಿಗಳಿಗೆ 10 ಜನ ಶಿಕ್ಷಕರು :ಸರ್ಕಾರದ ನಿಯಮಾವಳಿ ಪ್ರಕಾರ ಪ್ರಾಥಮಿಕ ಶಾಲೆಯಲ್ಲಿ 30 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ ಇರಬೇಕು. ಅನ್ಯಭಾಷಾ ಮಾಧ್ಯಮವಿದ್ದರೆ ಕನ್ನಡ ಭಾಷಾ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಲೇಬೇಕು.

ಆದರೆ, ಒಂದೇ ಪ್ರದೇಶದಲ್ಲಿರುವ ಈ ನಾಲ್ಕು ಶಾಲೆಗಳಲ್ಲಿ ಕೇವಲ 27 ಮಕ್ಕಳಿದ್ದಾರೆ. ಆದರೆ, ಅವರಿಗೆ 10 ಬೋಧಕರು ಪಾಠ ಮಾಡುತ್ತಿದ್ದಾರೆ. ಆದರೂ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ಈ ವಿಷಯ ಬಾರದಿರುವುದು ಅಚ್ಚರಿ ಮೂಡಿಸಿದೆ.

27 ವಿದ್ಯಾರ್ಥಿಗಳಿಗೆ 10 ಶಿಕ್ಷಕರಿಂದ ಪಾಠ

ಇಬ್ಬರು ಮಕ್ಕಳಿಗೆ ಇಬ್ಬರು ಶಿಕ್ಷಕಿಯರು :ಇಲ್ಲಿನ ಕೋನವಾಳ ಗಲ್ಲಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ನಂಬರ್-6 ಸ್ವಾತಂತ್ರ್ಯ ಪೂರ್ವ ಕಾಲದಲ್ಲೇ ಆರಂಭಗೊಂಡಿದೆ. ಅಂದು ಇಲ್ಲಿ ನೂರಾರು ಮಕ್ಕಳು ಓದುತ್ತಿದ್ದರಂತೆ. ಆದರೆ, ಇಂದು 1-5ನೇ ತರಗತಿಯಲ್ಲಿ ಇಬ್ಬರು ಮಕ್ಕಳಷ್ಟೇ ಕಲಿಯುತ್ತಿದ್ದಾರೆ. ಇಲ್ಲಿ ಕೇವಲ ಇಬ್ಬರು ಮಕ್ಕಳಿಗೆ ಪಾಠ ಮಾಡಲೆಂದೇ ಇಬ್ಬರು ಶಿಕ್ಷಕಿಯರಿದ್ದಾರೆ.

ಇದೇ ಕಟ್ಟಡದಲ್ಲೇ ಕುಲಕರ್ಣಿ ಗಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಕಳೆದೊಂದು ದಶಕದಿಂದ ನಡೆಯುತ್ತಿದೆ. ಇದು 1-7ನೇ ತರಗತಿ ಹೊಂದಿದೆ. ಇಲ್ಲಿ ಓದುತ್ತಿರುವ 13 ಮಕ್ಕಳಿಗೆ ಮೂವರು ಶಿಕ್ಷಕರಿದ್ದಾರೆ. ಸಾಲದೆಂಬಂತೆ ಮತ್ತೊಬ್ಬ ಶಿಕ್ಷಕಿಯನ್ನು ಬೇರೆ ಶಾಲೆಯಿಂದ ಇಲ್ಲಿಗೆ ಡೆಪ್ಟೇಷನ್ ಮಾಡಿಕೊಳ್ಳಲಾಗಿದೆ.

ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ವರ್ಗಾವಣೆ ಮಾಡಲಿ :ಇನ್ನು, ಇದೇ ಶಾಲೆಯ ಮೊದಲ ಮಹಡಿಯಲ್ಲಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯೂ ಇದ್ದು, 8 ಮಕ್ಕಳಿಗೆ ಇಬ್ಬರು ಬೋಧಕರಿದ್ದಾರೆ. ಈ ಶಾಲೆಗಳ‌ ಮಗ್ಗುಲಲ್ಲೇ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 28 ಇದೆ. ಇದು ಸುಂದರ ಕಟ್ಟಡವನ್ನೂ ಹೊಂದಿದೆ. ಎಲ್ಲ ಸೌಲಭ್ಯಗಳೂ ಇವೆ. ಆದರೆ, ನಾಲ್ವರು ಮಕ್ಕಳಿದ್ದು, ಅವರಿಗೆ ಇಬ್ಬರು ಶಿಕ್ಷಕರಿದ್ದಾರೆ. ಮಕ್ಕಳಿಗೆ ಅಗತ್ಯವಿರುವ ಕಡೆ ಶಿಕ್ಷಕರ ಕೊರತೆ ಇದೆ. ಅಂತತ ಸ್ಥಳಗಳಿಗೆ ಇವರನ್ನು ವರ್ಗಾವಣೆ ಮಾಡಬೇಕು ಎಂಬುವುದು ಸಾರ್ವಜನಿಕರ ಒತ್ತಾಯ.

ವಿದ್ಯಾರ್ಥಿಗಳಿಗಾಗಿ ಕಾದು ನಿಂತ ಶಿಕ್ಷಕಿಯರು :ಬೆಳಗಾವಿ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ -28ರಲ್ಲಿ ಕೇವಲ ನಾಲ್ವರು ವಿದ್ಯಾರ್ಥಿಗಳ ದಾಖಲಾತಿ ಇದೆ. ಆದ್ರೆ, ಇಲ್ಲಿರುವ ನಾಲ್ವರು ವಿದ್ಯಾರ್ಥಿಗಳಿಗೆ ಮರಾಠಿ ಮತ್ತು ಕನ್ನಡ ಮಾಧ್ಯಮದ ತಲಾ ಒಬ್ಬರಂತೆ ಇಬ್ಬರು ಶಿಕ್ಷಕಿಯರು ಪಾಠ ಮಾಡುತ್ತಾರೆ.

ಆದ್ರೆ, ವಿದ್ಯಾರ್ಥಿಗಳು ಶಾಲೆಗೆ ಬರದೇ ಹಿನ್ನೆಲೆ ಇಬ್ಬರು ಶಿಕ್ಷಕಿಯರು ಮಕ್ಕಳ ಬರುವಿಕೆ ಕಾಯುತ್ತಾ ಬಾಗಿಲಲ್ಲೇ ನಿಂತಿದ್ದಾರೆ. ಈ ಬಗ್ಗೆ ‌ಪ್ರಶ್ನೆ ಮಾಡಿದ್ರೆ ನಾಲ್ವರು ಮಕ್ಕಳ ಪೈಕಿ ಇಬ್ಬರು ಶಾಲೆಗೆ ಬರುತ್ತಾರೆ. ಇವತ್ತು ಅವರು ಬಂದಿಲ್ಲ. ಹೀಗಾಗಿ, ಬಾಗಿಲ ಹೊರೆಗೆ ಬಂದು ನಿಂತಿದ್ದೇವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಬರುವಿಕೆಗೆ ಕಾದು ನಿಂತ ಶಿಕ್ಷಕಿಯರು

ಶಾಲೆಗೆ ಮಕ್ಕಳೇ ಬರ್ತಿಲ್ಲ :ನಮಗೂ ಸರ್ಕಾರಿ ಶಾಲೆ ಉಳಿಸಿ ಬೆಳೆಸಬೇಕು ಎನ್ನೋ ಆಸೆಯಿದೆ. ಹಾಗಾಗಿ, ಸ್ಥಳೀಯರ ಮನೆಗಳಿಗೆ ಅಲೆದಾಡಿ, ವಿಶೇಷ ಅಭಿಯಾನ ನಡೆಸುತ್ತಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ಸೌಲಭ್ಯ ತಿಳಿಸಿದರೂ ಮಕ್ಕಳು ಬರುತ್ತಿಲ್ಲ.

ಆದರೆ, ಈ ಪರಿಸರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿವೆ. ‌ಹಾಗಾಗಿ, ಬಡತನವಿದ್ದರೂ ಪಾಲಕರು ಅಲ್ಲಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆಯೇ ಹೊರತು, ನಮ್ಮ ಸರ್ಕಾರಿ ಶಾಲೆಗೆ ಕಳುಹಿಸುತ್ತಿಲ್ಲ.

ನಾವೂ ಕೈಚೆಲ್ಲಿ ಕುಳಿತಿರುವುದಾಗಿ ಶಿಕ್ಷಕಿಯರು ತಿಳಿಸುತ್ತಾರೆ. ಅಗತ್ಯ ಸಿಬ್ಬಂದಿಯನ್ನಷ್ಟೇ ಇಲ್ಲಿರಿಸಬೇಕು. ಉಳಿದವರನ್ನು ವರ್ಗಾವಣೆ ಮಾಡಿ,‌ ಸಂಪನ್ಮೂಲ ವ್ಯರ್ಥವಾಗುವುದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ABOUT THE AUTHOR

...view details