ಬೆಳಗಾವಿ: ಮಕ್ಕಳಿಗಿಂತ ಹೆಚ್ಚು ಪ್ರೀತಿಸುತ್ತಿದ್ದ, ಕಾಳಜಿ ವಹಿಸುತ್ತಿದ್ದ, ಸುಖ-ದುಃಖಗಳಲ್ಲಿ ಭಾಗಿಯಾಗುತ್ತಿದ್ದ ಸಚಿವ ಸುರೇಶ್ ಅಂಗಡಿ ಅವರ ನಿಧನದಿಂದ ತಂದೆಯನ್ನೇ ಕಳೆದುಕೊಂಡಷ್ಟು ಮನಸ್ಸು ಭಾರವಾಗಿದೆ ಎಂದು ಸುರೇಶ್ ಅಂಗಡಿ ಅವರ ಕಾರು ಚಾಲಕರು ನೋವಿನ ನುಡಿಗಳನ್ನು ಆಡಿದ್ದಾರೆ.
ತಂದೆಯನ್ನೇ ಕಳೆದುಕೊಂಡಂತಾಗಿದೆ: ಸುರೇಶ್ ಅಂಗಡಿ ಕಾರು ಚಾಲಕರ ನೋವಿನ ನುಡಿ - ಸಚಿವ ಸುರೇಶ್ ಅಂಗಡಿ
ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಅವರ ಕಾರು ಚಾಲಕ ಮುದಕಪ್ಪ ನಾಯಕ ಮತ್ತು ಸತೀಶ ಹಸಬೆ ಕಂಬನಿ ಮಿಡಿದಿದ್ದಾರೆ. ತಂದೆಯನ್ನೇ ಕಳೆದುಕೊಂಡಷ್ಟು ಮನಸ್ಸು ಭಾರವಾಗಿದೆ ಎಂದು ನೋವಿನ ನುಡಿಗಳನ್ನಾಡಿದರು.
ಈಟಿವಿ ಭಾರತದ ಜೊತೆ ಮಾತನಾಡಿದ ಸುರೇಶ್ ಅಂಗಡಿ ಅವರ ಕಾರು ಚಾಲಕ ಮುದಕಪ್ಪ ನಾಯಕ, ಕಳೆದ 30 ವರ್ಷಗಳಿಂದ ಸುರೇಶ್ ಅಂಗಡಿ ಅವರ ಕಾರು ಚಲಾಯಿಸುತ್ತಿದ್ದೇನೆ. ಸೆ. 10ರಂದು ನಾನೇ ಸಾಂಬ್ರಾವರೆಗೆ ಹೋಗಿ ಬಿಟ್ಟು ಬಂದಿದ್ದೆ. ದೆಹಲಿಗೆ ಹೋದ ತಕ್ಷಣವೇ ಫೋನ್ ಮಾಡಿ ಹುಷಾರಾಗಿರುವಂತೆಯೂ ಸಲಹೆ ನೀಡಿದ್ದರು. 30 ವರ್ಷ ಅವರ ಜೊತೆಗೆ ಕಳೆದರೂ ಎಂದೂ ಕೆಲಸದವ ಎಂದು ಭಾವಿಸಲಿಲ್ಲ. ಕುಟುಂಬದ ಸದಸ್ಯರಂತೆ ನನ್ನನ್ನು ಕಾಣುತ್ತಿದ್ದರು. ಅವರ ಸಾವು ನೋವು ತಂದಿದೆ ಎಂದು ಕಂಬನಿ ಮಿಡಿದರು.
ಮತ್ತೋರ್ವ ಚಾಲಕ ಸತೀಶ ಹಸಬೆ ಮಾತನಾಡಿ, ನಾನು ಕಳೆದ 15 ವರ್ಷಗಳಿಂದ ಸುರೇಶ್ ಅಂಗಡಿ ಅವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಮೇಡಂ ಅವರ ಕಾರನ್ನು ನಾನೇ ಚಲಾಯಿಸುತ್ತಿದ್ದೆ. ಸೆ. 10ರಂದು ದೆಹಲಿಗೆ ಹೋಗುವಾಗ ಭೇಟಿ ಆಗಿದ್ದೆ. ಸೆ. 16ರಂದು ಮೇಡಂ ಕೂಡ ದೆಹಲಿಗೆ ಹೋದರು. ಆಗ ನಾನೇ ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದಿದ್ದೆ. ಸದ್ಯ ಸಾವಿನ ಸುದ್ದಿ ಕೇಳಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ತಂದೆಯನ್ನೇ ಕಳೆದುಕೊಂಡಷ್ಟು ನೋವಾಗಿದೆ ಎಂದಿದ್ದಾರೆ.