ಬೆಳಗಾವಿ: ಮಹಾಮಾರಿ ಕೊರೊನಾಗೆ ತುತ್ತಾಗಿ ಚಿಕಿತ್ಸೆ ಫಲಿಸದೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ವಿಧಿವಶರಾದ ಸುದ್ದಿಯನ್ನು ತಡರಾತ್ರಿ ತಾಯಿಗೆ ತಿಳಿಸಲಾಗಿದೆ.
ಸುರೇಶ್ ಅಂಗಡಿ ವಿಧಿವಶ: ಮುಗಿಲು ಮುಟ್ಟಿದ ತಾಯಿಯ ಆಕ್ರಂದನ
ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತಾಯಿ ಸೋಮವ್ವ ದಿಗ್ಭ್ರಮೆಗೆ ಒಳಗಾಗಿದ್ದಾರೆ. ಮಗನನ್ನು ತಂದು ಕೊಡಿ ಎಂದು ತಾಯಿ ಆಕ್ರಂದಿಸುತ್ತಿದ್ದಾರೆ.
ಬೆಳಗ್ಗೆ ಕೆ.ಕೆ.ಕೊಪ್ಪ ಗ್ರಾಮದಿಂದ ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸುರೇಶ್ ಅಂಗಡಿ ನಿವಾಸಕ್ಕೆ ತಾಯಿ ಸೋಮವ್ವ ಅಂಗಡಿ ಅವರನ್ನು ಕರೆ ತರಲಾಗಿದೆ. ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತಾಯಿ ಸೋಮವ್ವ ದಿಗ್ಭ್ರಮೆಗೆ ಒಳಗಾಗಿದ್ದಾರೆ. ಮಗನನ್ನು ತಂದು ಕೊಡಿ ಎಂದು ತಾಯಿ ಆಕ್ರಂದಿಸುತ್ತಿದ್ದಾರೆ. ತಾಯಿಗೆ ಸಂಬಂಧಿಕರು ಸಾಂತ್ವನ ಹೇಳಿ ಸಮಾಧಾನ ಪಡಿಸುತ್ತಿದ್ದಾರೆ. ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ ಹಾಗೂ ಕೊನೆಯದಾಗಿ ಮಗನ ಮುಖ ನೋಡಲಾಗಲಿಲ್ಲ ಎಂಬ ನೋವು ತಾಯಿಯನ್ನು ಕಾಡುತ್ತಿದೆ.
ದೆಹಲಿಗೆ ಅಂಗಡಿ ಕುಟುಂಬ: ಕೊರೊನಾದಿಂದ ವಿಧಿವಶರಾದ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲೇ ನಡೆಯಲಿದೆ. ಹೀಗಾಗಿ ಸುರೇಶ್ ಅಂಗಡಿ ಅವರ ಹಿರಿಯ ಪುತ್ರಿ ಸ್ಫೂರ್ತಿ, ಸಹೋದರ ಸೇರಿ 15 ಜನ ಕುಟುಂಬ ಸದಸ್ಯರು ದೆಹಲಿಗೆ ಪ್ರಯಾಣ ಬೆಳೆಸಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಕುಟುಂಬ ಸದಸ್ಯರು ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು. ಕುಟುಂಬ ಸದಸ್ಯರು ದೆಹಲಿ ತಲುಪಿದ ನಂತ್ರ ಅಂತ್ಯಕ್ರಿಯೆ ನಡೆಯಲಿದೆ.