ಬೆಳಗಾವಿ :ನಮ್ಮ ಸಚಿವ ಸಂಪುಟ ಶಾಂತಿ, ಸೌಹಾರ್ದತೆಯಿಂದ ಆಗಿದ್ದಕ್ಕೆ ಸಿದ್ದರಾಮಯ್ಯಗೆ ನಿರಾಶೆ ಆಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಂಪುಟ ವಿಸ್ತರಣೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಬಿ ಎಸ್ ಬೊಮ್ಮಾಯಿ ಸಂಪುಟ ರಚನೆ ಕುರಿತಂತೆ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿರುವುದು.. ಸಿದ್ದರಾಮಯ್ಯನವರಿಗೆ ನಿರಾಶೆ :ಸಂಪುಟ ವಿಸ್ತರಣೆಯಿಂದ ಏನೋ ಅನಾಹುತ ಆಗುತ್ತದೆ ಎಂದು ಸಿದ್ದರಾಮಯ್ಯ ಆಪೇಕ್ಷಿಸಿದ್ದರು. ನಾನು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ತಿಳಿದು ಸಿದ್ದರಾಮಯ್ಯ, ಆ ರೀತಿ ಮಾತನಾಡಿದ್ದರು. ಆದರೆ, ನಮ್ಮ ಸಚಿವ ಸಂಪುಟ ಶಾಂತಿ, ಸೌಹಾರ್ದತೆಯಿಂದ ಆಗಿದ್ದಕ್ಕೆ ಅವರಿಗೆ ನಿರಾಶೆ ಉಂಟಾಗಿದೆ. ಇದರಿಂದ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಆರೋಪ ಬಂದ ಕೂಡಲೇ ಅಪರಾಧಿಯಲ್ಲ :ಸಚಿವೆ ಶಶಿಕಲಾ ಜೊಲ್ಲೆಯವರ ಅವ್ಯವಹಾರದ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಾರ್ವಜನಿಕ ಜೀವನದಲ್ಲಿ ಇರುವವರ ಬಗ್ಗೆ ಆರೋಪಗಳು ಸರ್ವೇ ಸಾಮಾನ್ಯವಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಆರೋಪದ ಕುರಿತು ಕುಲಂಕಷವಾಗಿ ಪರಿಶೀಲನೆ ಮಾಡಬೇಕಾಗುತ್ತದೆ. ಆರೋಪ ಬಂದ ತಕ್ಷಣಕ್ಕೆ ಯಾರನ್ನು ಅಪರಾಧಿ ಸ್ಥಾನದಲ್ಲಿ ನೋಡಲು ಸಾಧ್ಯವಿಲ್ಲ. ಎಲ್ಲವೂ ಸೂಕ್ತ ಪರಿಶೀಲನೆ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದರು.
ತನಿಖಾ ವರದಿ ಬಳಿಕ ಮಾತನಾಡುವೆ :ಬೆಳಗಾವಿಯಲ್ಲಿ ಪೊಲೀಸರಿಂದಲೇ 4.7 ಕೆಜಿ ಸ್ಮಗ್ಲಿಂಗ್ ಗೋಲ್ಡ್ ಕಳ್ಳತನ ಆರೋಪ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಕೇಸ್ ಅನ್ನು ಸಿಐಡಿ ತನಿಖೆಗೆ ವಹಿಸಿರುವುದರಿಂದ ನನ್ನ ಹತ್ತಿರ ಯಾವುದೇ ಮಾಹಿತಿ ಇಲ್ಲ. ತನಿಖೆ ಮುಗಿದು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ ಎಂದರು.
ನೆರೆ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ :ಬೆಳಗಾವಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಪ್ರವಾಹದಿಂದ 7,800 ಕೋಟಿ ರೂ. ಹಾನಿ ಆಗಿದೆ. ಈ ಬಾರಿ 51 ಕಾಳಜಿ ಕೇಂದ್ರಗಳಲ್ಲಿ 38 ಸಾವಿರ ಜನ ಆಶ್ರಯ ಪಡೆದಿದ್ದಾರೆ. ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿನ ಜನರು, ಜಾನುವಾರುಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಎಂಟತ್ತು ದಿನ ಕಾಳಜಿ ಕೇಂದ್ರದಲ್ಲಿ ಇರಲು ಸೂಕ್ತ ವ್ಯವಸ್ಥೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಅಧಿಕಾರಿಗಳಿಗೆ ಎಚ್ಚರಿಕೆ :ಈ ವರ್ಷ ಬೆಳಗಾವಿಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಪಂಚಾಯತ್ ರಾಜ್ ಇಲಾಖೆಗೆ ಸೇರಿದ 560 ಕಿ.ಮೀ ಹಳ್ಳಿ ರಸ್ತೆ ಹಾಳಾಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ 300 ಕಿ.ಮೀ ರಸ್ತೆ ಕೊಚ್ಚಿ ಹೋಗಿದೆ. 70 ಸೇತುವೆಗಳಿಗೆ ಹಾನಿಯಾಗಿದೆ.1,340 ಕೋಟಿ ತೋಟಗಾರಿಕೆ ಹಾಗೂ ಕೃಷಿ ಬೆಳೆ ಹಾನಿಯಾಗಿದೆ.
ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಕೊಡಲು ಡಿಸಿಗೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಪರಿಹಾರ ವಿತರಣೆಯ ಯಾವುದೇ ರೀತಿಯ ಅಕ್ರಮಗಳು ಕಂಡು ಬಂದ್ರೆ ಸಂಬಂಧಿಸಿದ ಅಧಿಕಾರಿಗಳು, ನೌಕರರನ್ನ ತಕ್ಷಣವೇ ಅಮಾನತು ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.