ಬೆಳಗಾವಿ: ಇತ್ತೀಚೆಗೆ ಮಾಜಿ ಮುಖ್ಯಮಂತ್ರಿಯೂ ಆಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಒಂದು ಕ್ಷೇತ್ರ ಸಹ ಇಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಹತಾಶರಾಗಿದ್ದಾರೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಈ ವಿಚಾರವಾಗಿ ಬೆಳಗಾವಿ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜೋಶಿ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರಕ್ಕೆ ಅರ್ಜಿ ಕೊಡಬೇಕು, ಸ್ಪರ್ಧೆ ಮಾಡಬೇಕೆಂಬ ಗೊಂದಲದಲ್ಲಿದ್ದಾರೆ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವರು ಚಾಮುಂಡಿಯಲ್ಲಿ ಸೋತರು. ಬಾದಾಮಿಯಲ್ಲಿ ಕೇವಲ ಒಂದೂವರೆ ಸಾವಿರ ಮತಗಳಿಂದ ಗೆದ್ದಿದ್ದರು. ಇದರ ಅರ್ಥ ಅವರು ಎಲ್ಲಿ ಹೋಗ್ತಾರೋ ಅಲ್ಲಿ ಸೋಲ್ತಾರೆ ಎಂದರು.
ಸಿದ್ದರಾಮಯ್ಯಗೆ ಭಯ ಕಾಡ್ತಿದೆ.. ಈ ಹಿನ್ನೆಲೆ ಸಿದ್ದರಾಮಯ್ಯ ಅವರಿಗೆ ಭಯ ಕಾಡುತ್ತಿದೆ. ಇಂದೇ ತೀರ್ಮಾನ ಮಾಡಬೇಕು ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಶಿವಕುಮಾರ್ ಅವರಿಗೂ ಇದೇ ಬೇಕಾಗಿದ್ದು. ಎಲ್ಲೂ ಗೆಲ್ಲಲ್ಲ. ಯಾವುದನ್ನು ಹೇಳ್ತಾರೆ ಹೇಳಲಿ. ಇವರನ್ನು ಮೂಲೆ ಗುಂಪು ಮಾಡಬೇಕು ಅಂತಾ ಶಿವಕುಮಾರ್ ತೀರ್ಮಾನ ಮಾಡಿದ್ದಾರೆ. ಅದಕ್ಕೆ ಅರ್ಜಿ ಕೊಡಿ ಅಂತಾ ಹೇಳಿದ್ದಾರೆ. ಇವರು ಅರ್ಜಿ ಎಲ್ಲಿಂದ ಕೊಡಬೇಕು. ಅದಕ್ಕೆ ಹತಾಶರಾಗಿರುವ ಸಂದರ್ಭದಲ್ಲಿ ತಾನೇ ಅತ್ಯಂತ ಸ್ಟ್ರಾಂಗ್ ಲೀಡರ್ ಅಂತಾ ತೋರಿಸಿಕೊಳ್ಳಲು ಬಿಜೆಪಿ ವಿರುದ್ಧ ಹತಾಶವಾದಂತ, ಬಾಲಿಷವಾದಂತ, ಅಪ್ರಬುದ್ಧವಾದಂತ, ಅತ್ಯಂತ ನಿಷ್ಪ್ರಯೋಜಕ ಹೇಳಿಕೆಗಳನ್ನು ಸಿದ್ದರಾಮಯ್ಯ ಕೊಡ್ತಾರೆ. ಸಿದ್ದರಾಮಯ್ಯನವರ ಬಗ್ಗೆ ನನಗೆ ಕನಿಕರ ಇದೆ ಎಂದು ಜೋಶಿ ವ್ಯಂಗ್ಯವಾಡಿದರು.
ಸಂವಿಧಾನದ ಪ್ರಕಾರ ಚುನಾವಣೆಗೆ ನಿಲ್ಲಲು 25 ವರ್ಷ ವಯಸ್ಸಾಗಬೇಕು. ಹುಚ್ಚರಿರಬಾರದು. ಚುನಾವಣೆ ನಿಲ್ಲಲು ಸಿದ್ದರಾಮಯ್ಯ ಅವರಿಗೆ ಅರ್ಹತೆ ಇದೆ. ಆದರೆ ಇಷ್ಟು ವರ್ಷಗಳ ಕಾಲ ರಾಜಕಾರಣ ಮಾಡಿ ಸೋತವರು ಬ್ಯಾಲೆನ್ಸ್ ಮೆಂಟೈನ್ ಮಾಡಬೇಕು. ಅವರ ಘನತೆ ಗೌರವಕ್ಕೆ ತಕ್ಕ ಹಾಗೇ ಮಾತಾಡಲಿ ಎಂದು ಕೆಂದ್ರ ಸಚಿವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.