ಬೆಳಗಾವಿ:ಭೂ ತಾಯಿಗೆ ಪೂಜೆ ಮಾಡುವ ಮೂಲಕ ಉತ್ತರ ಕರ್ನಾಟಕದಲ್ಲಿ ಸೀಗೆ ಹುಣ್ಣಿಮೆಯನ್ನು ಸಂಭ್ರಮ ಸಡಗರದಿಂದ ರೈತರು ಆಚರಣೆ ಮಾಡಿದ್ದಾರೆ.
ಚಿಕ್ಕೋಡಿ ತಾಲೂಕಿನಲ್ಲಿ ರೈತರು ಭೂತಾಯಿಗೆ ಪೂಜೆ ಸಲ್ಲಿಸಿ ಮುಂಗಾರು ಫಸಲನ್ನು ಮನೆ ತುಂಬಿಕೊಳ್ಳುವುದರ ಜೊತೆಗೆ ಜೋಳ, ಗೋವಿನ ಜೋಳ, ಸಜ್ಜೆ, ಹೆಸರುಕಾಳು, ಸೂರ್ಯಕಾಂತಿ, ರಾಗಿ, ಭತ್ತ ಹೀಗೆ ಹಲವು ಧಾನ್ಯಗಳನ್ನು ರಾಶಿ ಮಾಡುತ್ತಾರೆ. ರಾಶಿಯ ಸಂಭ್ರಮದೊಂದಿಗೆ ಚಳಿಗಾಲ ಸ್ವಾಗತಿಸುವ ಸಂಕ್ರಮಣದ ಕಾಲ ಇದಾಗಿದೆ. ಉತ್ತರ ಕರ್ನಾಟಕದಲ್ಲಿ ರೈತರು ಮಸಾರಿ (ಕೆಂಪು) ಮಣ್ಣಿನಲ್ಲಿ ಮುಂಗಾರು ಫಸಲು ಸಂಪೂರ್ಣವಾಗಿ ಬಂದಾಗ ಸೀಗೆಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಇಲ್ಲಿನ ವಿಶೇಷವಾಗಿದೆ.
ಸೀಗೆ ಹುಣ್ಣಿಮೆಯ ದಿನದಂದು ಹೊಲದಲ್ಲಿದ್ದ ಆರು ಕಲ್ಲುಗಳನ್ನು ಆರಿಸಿ ತಂದು ಬನ್ನಿಗಿಡದ ಅಥವಾ ಹೊಲದಲ್ಲಿ ಮೊದಲಿಗೆ ಐದು ಕಲ್ಲುಗಳನ್ನು ಅದರ ಹಿಂದೆ ಒಂದು ಕಲ್ಲುನ್ನು ಇಟ್ಟು ಕುಂಕುಮ, ವಿಭೂತಿ ಹಚ್ಚಿ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ಮುಂದೆ ಪೂಜಿಸಿದ ಐದು ಕಲ್ಲು ಮೂರ್ತಿಗಳನ್ನು ಪಂಚ ಪಾಂಡವರು ಮತ್ತು ಹಿಂದೆ ಪೂಜಿಸಿದ ಕಲ್ಲು ಮೂರ್ತಿಯನ್ನು ಕರ್ಣನದೆಂದು ಪೂಜಿಸುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.