ಬೆಂಗಳೂರು : ಕರ್ನಾಟಕ ಅನುಸೂಚಿತ ಜಾತಿ, ಪಂಗಡಗಳ ವಿಧೇಯಕ(ಬಿಲ್) 2022 ಅನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ವಿಧಾನ ಪರಿಷತ್‌ನಲ್ಲಿ ಮಂಡಿಸಿ ಬೆಂಬಲಿಸುವಂತೆ ಮನವಿ ಮಾಡಿದರು.
ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿ ಈ ಬಿಲ್ ಜಾರಿಗೆ ತರಬೇಕಿತ್ತು. ರಾಜ್ಯದ ಜನತೆಯಲ್ಲಿ ಸಮಾನತೆಯ ಕಾನೂನು ತರುವ ಎಲ್ಲಾ ವಿಧದ ಹಕ್ಕು ಸರ್ಕಾರಕ್ಕಿದೆ. ಈ ಕಾರ್ಯವನ್ನು ಮೊದಲೇ ಮಾಡಿ, ಶೆಡ್ಯೂಲ್ 9ರ ಅಡಿ ತಂದಿದ್ದರೆ ಸರ್ಕಾರಕ್ಕೆ ನಿಜವಾಗಿಯೂ ಎಸ್ಸಿ ಎಸ್ಟಿಗಳ ಮೇಲೆ ಕಾಳಜಿ ಇದೆ ಎಂದು ಹೇಳಬಹುದಿತ್ತು ಎಂದರು.
ಚುನಾವಣೆಗೆ ಎರಡು ತಿಂಗಳು ಇರುವಾಗ ಇಂತದ್ದೊಂದು ನಿರ್ಧಾರ ಕೈಗೊಂಡಿರುವುದು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಕಾರ್ಯ ಅನ್ನಿಸುತ್ತಿದೆ. ಹಲವು ರಾಜ್ಯಗಳಲ್ಲಿ ಚುನಾವಣೆ ಸಂದರ್ಭ ಈ ಕಾರ್ಯ ಆಗಿದೆ. ಸುಪ್ರೀಂ ಕೋರ್ಟ್ ಸಹ ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದ ಮೀಸಲಾತಿ ನೀಡಿಕೆಗೆ ಒಪ್ಪಿಗೆ ಸಿಕ್ಕಿಲ್ಲ. ಇದನ್ನು ಪಡೆಯದೇ ಹೇಗೆ ತರುತ್ತೀರಿ ಎಂದು ಪ್ರಶ್ನಿಸಿದರು.
ಸಚಿವ ಮಾಧುಸ್ವಾಮಿ ಮಾತನಾಡಿ, ಇಂದಿರಾ ಸಹಾನಿ ಪ್ರಕರಣದಲ್ಲಿ ಶೇ.50ಕ್ಕೂ ಹೆಚ್ಚು ಮೀಸಲಾತಿ ಮೀರಬಾರದು ಎಂದು ಹೇಳಿದೆ. ಆದರೆ ಅದನ್ನು ಆದೇಶಿಸಿಲ್ಲ. ತಮಿಳುನಾಡಿನಲ್ಲಿ ಇಂದಿಗೂ ಶೇ.67 ರಷ್ಟು ಮೀಸಲಾತಿ ನೀಡುತ್ತಿದೆ. ಇದಕ್ಕೆ ತಕರಾರು ಎದ್ದಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಹೇಳಿದೆ, ಆದೇಶಿಸಿಲ್ಲ ಎಂದು ವಿವರಿಸಿದರು.
ನಂತರ ತಿಪ್ಪೆಸ್ವಾಮಿ ಪ್ರಶ್ನೆಗೆ ಉತ್ತರಿಸಿ, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿ ಒಬಿಸಿ ಮೀಸಲಾತಿ ಹೆಚ್ಚಳ ಆದ ಬಳಿಕ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ನಾವು ಮಧ್ಯ ಬರಲ್ಲ. ರಾಜ್ಯದ ವಿವೇಚನೆಗೆ ಬಿಟ್ಟದ್ದು ಎಂದಿದೆ. ಅದಾದ ಬಳಿಕ ಮೀಸಲಾತಿ ನೀಡಿಕೆ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದರು.
ಪ್ರತಿಪಕ್ಷ ನಾಯಕರು ಮಾತು ಮುಂದುವರಿಸಿ, ಹಿಂದುಳಿದ ವರ್ಗದವರು ದೀಪವನ್ನೇ ಬೆಳಕು ಅಂದುಕೊಂಡಿದ್ದಾರೆ. ಆದ್ದರಿಂದ ಈ ಮೀಸಲಾತಿ ಹೆಸರಿನಲ್ಲಿ ಆಸೆ ಹುಟ್ಟಿಸಬೇಡಿ. ಅವರು ಸುಟ್ಟು ಹೋಗುತ್ತಾರೆ. ದಮನಿತರ ಪರವಾಗಿ ಸರ್ಕಾರ ಕೆಲಸ ಮಾಡಬೇಕು. ಕಾನೂನು ಮಾಡುವಾಗ ಎಲ್ಲಾ ವಿಧದ ರಕ್ಷಣೆ ನೀಡಿ ಮಾಡಿದ್ದರೆ ಅಭ್ಯಂತರ ಇರಲಿಲ್ಲ. ಈ ಎಚ್ಚರಿಕೆವಹಿಸದೇ ಸರ್ಕಾರ ಬಿಲ್ ತರಲು ಮುಂದಾಗಿರುವುದು ದುರ್ಭಲ ವರ್ಗದವರಿಗೆ ಅವಕಾಶ ಸಿಗುವುದಿಲ್ಲ ಎಂದು ಹೇಳಿದರು.
ಸದಾ ಮೀಸಲಾತಿಯ ವಿರುದ್ಧವಾಗಿದ್ದ ಬಿಜೆಪಿಗೆ ಯಾಕೆ ಮೀಸಲಾತಿ ಬಗ್ಗೆ ಒಲವು ವ್ಯಕ್ತವಾಗುತ್ತಿದೆ ಎನ್ನುವುದು ಅರಿವಾಗುತ್ತಿಲ್ಲ. ಒಬ್ಬ ಸಂಸದರು ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿದ್ದರು ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮಾಧುಸ್ವಾಮಿ, ನಾವು ಅಧಿಕಾರಕ್ಕೆ ಬರುವವರೆಗೂ ಸಂವಿಧಾನ ತಿದ್ದುಪಡಿ, ಬದಲಾವಣೆ ಆಗಿಯೇ ಇರಲಿಲ್ಲವೇ? ನಾವು ಬಂದ ಮೇಲೆ ಎಷ್ಟು ಬದಲಾವಣೆ ಮಾಡಿದ್ದೇವೆ ಎಂದು ಪ್ರಶ್ನಿಸಿದರು.
ಈ ವೇಳೆ ಸದನದಲ್ಲಿ ಆಡಳಿತ, ಪ್ರತಿಪಕ್ಷ ಸದಸ್ಯರ ನಡುವೆ ದೊಡ್ಡ ಗದ್ದಲ ಏರ್ಪಟ್ಟಿತು. ಸಭಾಪತಿಗಳು ಸಮಾಧಾನ ಮಾಡಿ, ಪ್ರತಿಪಕ್ಷ ನಾಯಕರ ಮಾತಿಗೆ ಅವಕಾಶ ಮಾಡಿಕೊಟ್ಟರು. ಆದರೆ ಹರಿಪ್ರಸಾದ್, ನಾವು ಮೀಸಲಾತಿ ನೀಡಿ ದಮನಿತರಿಗೆ ಉದ್ಯೋಗ ಕೊಟ್ಟಿದ್ದೆವು. ಆದರೆ ಈಗಿನ ಸರ್ಕಾರ ಖಾಸಗೀಕರಣ ನೆಪದಲ್ಲಿ ಎಲ್ಲವನ್ನೂ ಹಾಳು ಮಾಡುತ್ತಿದೆ ಎಂದಾಗ ಮತ್ತೆ ಸದನದಲ್ಲಿ ಗದ್ದಲ ಆರಂಭವಾಯಿತು.
ಒಂದಿಷ್ಟು ಗದ್ದಲದ ನಂತರ ಮಾತು ಮುಂದುವರಿಸಿದ ಪ್ರತಿಪಕ್ಷ ನಾಯಕರು, ನಿಜವಾದ ಕಾಳಜಿ ಇದ್ದರೆ ನಾವು ವಿರೋಧಿಸುತ್ತಿರಲಿಲ್ಲ. ನಮಗೆ ಕೇವಲ ಐದಾರು ಪ್ರತಿಶತ ನೀಡಿದ್ದರಿಂದ ನಮಗೆ ಸಮಾಧಾನವಿಲ್ಲ. ತಮಿಳುನಾಡು ಸರ್ಕಾರ ಮಾದರಿಯಲ್ಲಿ ಕಾನೂನಾಗಿ ಜಾರಿಗೆ ತರಬೇಕಿತ್ತು. ನಿಮ್ಮಿಂದ ನಾವು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಮೀಸಲಾತಿ ವಿಚಾರದಲ್ಲಿ ನಾವು ನಿಮ್ಮ ಬೆಂಬಲಕ್ಕೆ ನೀಡುತ್ತೇವೆ. ಆದರೆ ಷಡ್ಯೂಲ್ 9ಕ್ಕೆ ಸೇರಿಸಿ ಎಂದು ಒತ್ತಾಯಿಸಿದರು.
ಬೆಂಗಳೂರಲ್ಲಿ ವಿಶೇಷ ಅಧಿವೇಶನ ಕರೆದು ಸುದೀರ್ಘ ಚರ್ಚೆ ನಡೆಸಿ, ಉತ್ತರ ನೀಡಿ ಕಾನೂನು ತರಬಹುದಿತ್ತು. ಈಗ ಏನೇ ಮಾಡಿದರೂ ಸಾಕಷ್ಟು ಕಾನೂನು ತೊಡಕು ಎದುರಾಗುತ್ತದೆ. ಅದನ್ನು ಹೇಗೆ ಎದುರಿಸುತ್ತೀರಿ ಅನ್ನುವುದನ್ನು ನೋಡಬೇಕಿದೆ. ಸದ್ಯ ಸರ್ಕಾರ ತರಲು ಮುಂದಾಗಿರುವ ವಿಧೇಯಕಕ್ಕೆ ನಾವು ಸಮ್ಮತಿ ನೀಡುತ್ತೇವೆ ಎಂದು ಹೇಳಿದರು. ಇದಾದ ಬಳಿಕ ಪರಿಷತ್ತಿನಲ್ಲಿ ವಿಧೇಯಕ ಅಂಗೀಕಾರ ಪಡೆಯಿತು.
ಇದನ್ನೂ ಓದಿ:'ಮೇಲ್ಜಾತಿ ಮೀಸಲಾತಿಗೆ ಸುಪ್ರೀಂನಲ್ಲಿ ಹಿನ್ನಡೆ, ಎಸ್ಸಿ-ಎಸ್ಟಿ ವಿಚಾರದಲ್ಲಿ ಅಂತಹ ಪರಿಸ್ಥಿತಿ ಉದ್ಭವಿಸದು'