ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೋ ಆಫ್ ಕ್ರೆಡಿಟ್ ಸೊಸೈಟಿಯಲ್ಲಿ ಉಳಿತಾಯದ ಹಣವನ್ನು ಠೇವಣಿ ಮಾಡಿದ್ದ ಠೇವಣಿದಾರರು ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ಪ್ರತಿಭಟನೆ ನಡೆಸಿ, ಸಚಿವರಾದ ಎಚ್ ಸಿ ಮಹದೇವಪ್ಪ, ಕೆ ಎಚ್ ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.
ನಮ್ಮ ಹೋರಾಟದ ಫಲವಾಗಿ ಬೆಂಗಳೂರಿನಲ್ಲಿರುವ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಗಳು ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಠೇವಣಿದಾರರ ಹಣ ಹಿಂದಿರುಗಿಸುವುದಕ್ಕಾಗಿ ಪ್ರಕಟಣೆ ಹೊರಡಿಸಿದ್ದಾರೆ. ಪರಿಹಾರ ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೊಂದಿಗೆ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಖುದ್ದಾಗಿ ಸಲ್ಲಿಸುವಂತೆ ಹೇಳಿದ್ದಾರೆ. ಆದರೆ, ಠೇವಣಿದಾರರಲ್ಲಿ ಕೆಲವರು ವೃದ್ಧರು, ಮಹಿಳೆಯರು, ವಿಕಲಚೇತನರು ಇದ್ದಾರೆ. ಅವರಿಗೆ ಬೆಂಗಳೂರಿಗೆ ಹೋಗಿ ಬರಲು ತೊಂದರೆಯಾಗುತ್ತಿದ್ದು, ಕೂಡಲೇ ಬೆಳಗಾವಿಯಲ್ಲಿ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಗ್ರಾಹಕ ರಾಜೇಂದ್ರ ಎಂಬುವರು, ಸುಮಾರು 30 ಸಾವಿರಕ್ಕೂ ಹೆಚ್ಚು ಠೇವಣಿದಾರರು ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಬೇಕು. ಠೇವಣಿ ಹಣ 5 ಸಾವಿರ ಹಾಗೂ 10 ಸಾವಿರ ರೂ. ಗಳಷ್ಟು ಇದ್ದು, ಈ ಮೊತ್ತಕ್ಕಾಗಿ ಬೆಂಗಳೂರವರೆಗೆ ಪ್ರಯಾಣ ಮಾಡುವುದು ಆರ್ಥಿಕ ಹೊರೆಯಾಗುತ್ತದೆ. ಇನ್ನೂ ಕೆಲವರು ನಿವೃತ್ತ ನೌಕರರು ಹಿರಿಯ ನಾಗರಿಕರಿದ್ದು ದೂರದ ಪ್ರಯಾಣ ಮಾಡಲು ಅಸಮರ್ಥರಾಗಿದ್ದಾರೆ. ಆದ್ದರಿಂದ ಸರ್ಕಾರಕ್ಕೆ ತಮ್ಮ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.