ಬೆಳಗಾವಿ:ಇಬ್ಬರುಮುಸುಕುಧಾರಿಗಳು ಪಿಸ್ತೂಲ್ ತೋರಿಸಿ ಬಂಗಾರದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಬೆಳಗಾವಿಯ ಶಾಹುನಗರದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಪ್ರಶಾಂತ ಹೊನರಾವ್ ಎಂಬವರಿಗೆ ಸೇರಿದ ಸಂತೋಷಿ ಜ್ಯುವೆಲ್ಲರಿಯಲ್ಲಿ ಘಟನೆ ನಡೆದಿದೆ. ಎಂದಿನಂತೆ ಬಾಗಿಲು ತೆರೆದು ಪ್ರಶಾಂತ ಅಂಗಡಿಯಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಅಂಗಡಿಗೆ ನುಗ್ಗಿದ್ದಾರೆ. ಒಬ್ಬ ಪಿಸ್ತೂಲಿನಿಂದ ಹೆದರಿಸಿ, ಚಿನ್ನಾಭರಣ ನೀಡುವಂತೆ ಒತ್ತಾಯಿಸಿದ್ದಾನೆ. ಪ್ರಶಾಂತ ಪ್ರತಿರೋಧ ತೋರುತ್ತಿದ್ದಂತೆ ದರೋಡೆಕೋರರು ಹಲ್ಲೆಗೆ ಮುಂದಾಗಿದ್ದಾರೆ. ಇದಕ್ಕೆ ಪ್ರಶಾಂತ ತೀವ್ರ ಪ್ರತಿರೋಧ ಒಡ್ಡಿದ್ದು ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಗಾಯಗೊಂಡ ಪ್ರಶಾಂತ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಡಿಸಿಪಿ ರೋಹನ ಜಗದೀಶ, ಡಿಸಿಪಿ ಪಿ.ವಿ.ಸ್ನೇಹಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನ್ಯಾಯ ವಿಜ್ಞಾನ ಪ್ರಯೋಗಾಲಯ, ಶ್ವಾನ ದಳದ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೊಂಡರು.