ಬೆಳಗಾವಿ: ನಾನು 36 ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಸಕ್ರಿಯನಾಗಿದ್ದೇನೆ. ನಾಲ್ಕು ಬಾರಿ ವಿವಿಧ ಇಲಾಖೆ ಸಚಿವನಾಗಿ ಕೆಲಸ ಮಾಡಿದ ಅನುಭವವೂ ಇದೆ. ಹೀಗಾಗಿ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಅಂಕಿಸಂಖ್ಯೆ, ಬಂಧಿಖಾನೆ ಖಾತೆ ಕೊಟ್ಟರೂ ನಿಭಾಯಿಸುವೆ ಎಂದು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸಲು ಸಿದ್ಧ: ಉಮೇಶ್ ಕತ್ತಿ - ಹುಕ್ಕೇರಿ ಶಾಸಕ ಉಮೇಶ ಕತ್ತಿ ಪ್ರತಿಕ್ರಿಯೆ
ರಾಜ್ಯ ರಾಜಕಾರಣದಲ್ಲಿ ಹಲವು ವರ್ಷಗಳಿಂದ ಸಕ್ರಿಯನಾಗಿದ್ದು, ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ, ಇಲ್ಲವಾದರೆ ಶಾಸಕನಾಗಿ ಇರುತ್ತೇನೆ. ರಾಜಕೀಯದಲ್ಲಿ ಸಾಕಷ್ಟು ಅನುಭವ ಇದ್ದು, ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸುವುದಾಗಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ಸೇರ್ಪಡೆ ಸಂಬಂಧ ಹೈಕಮಾಂಡ್ ನಿಂದ ನನಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ನನಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿ ಬರುತ್ತಿವೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ, ಇಲ್ಲವಾದರೆ ಶಾಸಕನಾಗಿ ಇರುತ್ತೇನೆ. ಮಂಗಳವಾರ ಶಾಸಕಾಂಗ ಸಭೆ ಇದ್ದು, ಅಲ್ಲಿಯೇ ಎಲ್ಲವೂ ಗೊತ್ತಾಗಲಿದೆ. ಯಾರಿಂದಲೂ ನನಗೆ ಸ್ಪರ್ಧೆವೊಡ್ಡಲು ಆಗುವುದಿಲ್ಲ. ರಾಜಕಾರಣದಲ್ಲಿ ನನಗ್ಯಾರೂ ಶತ್ರುಗಳು ಇಲ್ಲ. ಜಾತಿ ಹೆಸರಲ್ಲಿ ನಾನು ಎಂದೂ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ನೆರೆ ಹಾವಳಿಗೆ ಜಿಲ್ಲೆ ಸಾಕಷ್ಟು ನಷ್ಟ ಅನುಭವಿಸಿದ್ದು, ಈ ಬಗ್ಗೆ ಸರ್ಕಾರ ಸ್ಪಂದಿಸುತ್ತಿದೆ. ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರ ಗಳು ಬೆಳಗಾವಿ ಜಿಲ್ಲೆಯಲ್ಲಿವೆ. ಸುವರ್ಣಸೌಧ ನಿರ್ಮಾಣದ ಬಳಿಕ ಬೆಳಗಾವಿಯನ್ನು ಎರಡನೇ ರಾಜಧಾನಿ ಎಂದೇ ಗುರುತಿಸಲಾಗುತ್ತಿದೆ. ಹೀಗಾಗಿ ನಾಲ್ಕು ಸಚಿವ ಸ್ಥಾನ ಬೆಳಗಾವಿಗೆ ಸಿಗಬೇಕು ಎಂಬುದು ನನ್ನ ಆಶಯ. ಆರಂಭದಲ್ಲಿ ಎರಡಾದರೂ ಸಚಿವ ಸ್ಥಾನ ಬೆಳಗಾವಿಗೆ ಸಿಗುವ ನಿರೀಕ್ಷೆ ಇದೆ ಎಂದರು.