ಬೆಳಗಾವಿ: ಸಚಿವ ಸ್ಥಾನ ಕಳೆದುಕೊಂಡ ಬಳಿಕ ಕಾಂಗ್ರೆಸ್ ಜತೆಗೆ ಅಂತರ ಕಾಯ್ದುಕೊಂಡಿರುವ ಶಾಸಕ ರಮೇಶ ಜಾರಕಿಹೊಳಿ ತನ್ನ ಅತ್ಯಾಪ್ತ ಹಾಗೂ ಅಥಣಿ ಶಾಸಕ ಮಹೇಶ ಕುಮಟಳ್ಳಿ ಜತೆಗೆ ಸದ್ದಿಲ್ಲದೇ ದೆಹಲಿಗೆ ತೆರಳಿದ್ದಾರೆ. ಇಷ್ಟು ದಿನ ಸೈಲೆಂಟ್ ಆಗಿದ್ದ ರಮೇಶ ಜಾರಕಿಹೊಳಿ ಅವರ ದಿಢೀರ್ ದೆಹಲಿ ಭೇಟಿ ಹಲವು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ದೆಹಲಿಯತ್ತ ದಿಢೀರ್ ಪಯಣ ಬೆಳೆಸಿದ ರಮೇಶ್ ಜಾರಕಿಹೊಳಿ: ದೋಸ್ತಿ ಪಕ್ಷಗಳಿಗೆ ಕೊಡ್ತಾರಾ ಶಾಕ್ ? - ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ ಅವರು ದಿಢೀರ್ ಆಗಿ ತಮ್ಮ ಆಪ್ತ ಹಾಗೂ ಅಥಣಿ ಶಾಸಕ ಮಹೇಶ ಕುಮಟಳ್ಳಿ ಜತೆಗೆ ದೆಹಲಿಗೆ ತೆರಳಿದ್ದಾರೆ.
ಕೆಲ ದಿನಗಳ ಹಿಂದೆ ಮುಂಬೈಗೆ ಹೋಗಿದ್ದ ರಮೇಶ ಜಾರಕಿಹೊಳಿ ಅಲ್ಲಿನ ಬಿಜೆಪಿ ನಾಯಕರ ಜತೆಗೆ ಚರ್ಚೆ ನಡೆಸಿದ್ದರು. ಇದೀಗ ಮತ್ತೆ ದೆಹಲಿಗೆ ಭೇಟಿ ನೀಡಿರುವ ಅವರು, ಅಲ್ಲಿನ ಬಿಜೆಪಿ ನಾಯಕರನ್ನು ಭೇಟಿ ಮಾಡುವ ಯೋಜನೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ಸೇರ್ಪಡೆಗೊಂಡು ದೋಸ್ತಿ ಪಕ್ಷಗಳಿಗೆ ಶಾಕ್ ಕೊಡ್ತಾರೆಯೇ ಎಂಬ ಅನುಮಾನಗಳು ಮೂಡುತ್ತಿವೆ.
ಡಾ.ಉಮೇಶ ಜಾಧವ್ ಅವರು ಶಾಸಕ ಹಾಗೂ ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ರಮೇಶ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ರೆಬಲ್ ಶಾಸಕರ ಜತೆಗೆ ಸಭೆ ನಡೆಸಿದ್ದರು. ಅಲ್ಲದೇ ರಮೇಶಗೆ ಸಿಎಂ ಹೆಚ್ಡಿಕೆ ಅವರು ಸಚಿವ ಸ್ಥಾನದ ಆಫರ್ ಕೂಡ ಕೊಟ್ಟಿದ್ದರು. ಕಾಂಗ್ರೆಸ್ನಲ್ಲಿ ಮುಂದುವರೆಯುವಂತೆ ಆಪ್ತರೂ ಶಾಸಕ ರಮೇಶ್ಗೆ ಸಲಹೆ ನೀಡಿದ್ದರು.ಆದರೆ ಕಾಂಗ್ರೆಸ್ನಲ್ಲಿ ಮುಂದುವರೆಯಲು ರಮೇಶ್ ನಿರಾಸಕ್ತಿ ತೋರುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಜಿಲ್ಲಾ ಮುಖಂಡರ ಸಭೆಗೂ ಶಾಸಕ ರಮೇಶ ಜಾರಕಿಹೊಳಿ ಗೈರಾಗಿದ್ದರು. ಮುಂಬೈ ಬಳಿಕ ಇದೀಗ ದೆಹಲಿಯತ್ತ ಮುಖ ಮಾಡಿರುವ ರಮೇಶ ನಡೆ ಕುತೂಹಲಕ್ಕೆ ಕಾರಣವಾಗಿದೆ.