ಬೆಳಗಾವಿ :ಬರಗಾಲ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿ-ಬಿಳಕಿ ಗ್ರಾಮದೇವತೆಯರ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲಾಯಿತು.
ಸಾಮಾನ್ಯವಾಗಿ ಗ್ರಾಮದೇವತೆಗಳ ಜಾತ್ರೆಗಳು ನಡೆದರೇ ದೇವಿಯರ ಹೊನ್ನಾಟ, ದೇವಿ ಪ್ರತಿಷ್ಠಾಪನೆ, ರಥೋತ್ಸವ ಹೀಗೆ ವಿವಿಧ ಆಚರಣೆಗಳು ನಡೆಯುತ್ತವೆ. ಆದ್ರೆ ಈ ಜಾತ್ರೆ ತುಂಬಾ ಡಿಫರೆಂಟ್, ಇಲ್ಲಿ ಹೊನ್ನಾಟ ಆಡಬೇಕು ಅಂದ್ರೆ ಪ್ರತಿ ಮನೆಯಿಂದ ಒಬ್ಬೊಬ್ಬ ಪುರುಷರು ಕೈಯಲ್ಲಿ ಕೋಲು, ಕಟ್ಟಿಗೆಯಿಂದ ತಯಾರಿಸಿದ ಗದೆ, ಖಡ್ಗ, ಈಟಿಗಳನ್ನು ಹಿಡಿದು ಬರಬೇಕು. ಸಾವಿರಾರು ಜನ ಪರಸ್ಪರ ಅಣಕು ಯುದ್ಧ ಮಾಡಬೇಕು. ಜನ್ರು ಯುದ್ಧದ ರೀತಿಯಲ್ಲಿ ತಮ್ಮ ಕೈಯಲ್ಲಿನ ಕಟ್ಟಿಗೆಯ ಆಯುಧಗಳಲ್ಲಿ ಬಡಿದಾಡುತ್ತ ಹೋದಂತೆ ದೇವಿ ಅವರನ್ನು ಹಿಂಬಾಲಿಸುತ್ತಾಳೆ.
ಊರಿ ಬಿಸಿಲಿನ ಮಧ್ಯೆ 'ಮಳೆ ಜಾತ್ರೆ' ಆಚರಣೆ ಹೌದು, ಇಂತಹ ಒಂದು ವಿಭಿನ್ನ ಜಾತ್ರೆ ಪ್ರತಿ ಐದು ವರ್ಷಕ್ಕೊಮ್ಮೆ ಅವರೊಳ್ಳಿ-ಬಿಳಕಿ ಗ್ರಾಮದಲ್ಲಿ ನಡೆಯುತ್ತಾ ಬಂದಿದೆ. ಆದ್ರೆ ಈಗ 8 ವರ್ಷಗಳ ಬಳಿಕ ಜಾತ್ರೆ ಮಾಡಲಾಗಿದೆ. 8 ವರ್ಷದ ಹಿಂದೆ ಅವರೊಳ್ಳಿ-ಬಿಳಕಿ ಗ್ರಾಮದೇವತೆಯರ ಜಾತ್ರೆಯನ್ನು ಜಂಟಿಯಾಗಿ ಮಾಡಲಾಗಿತ್ತು. ಪದ್ಧತಿಯ ಪ್ರಕಾರ ಮೂರ ವರ್ಷದ ಹಿಂದೆಯೇ ಜಾತ್ರೆ ನಡೆಯಬೇಕಿತ್ತು. ಆದರೆ ಮಳೆ ಇಲ್ಲದ ಕಾರಣ ಜಾತ್ರೆ ಮಾಡಿಯೇ ಇರಲಿಲ್ಲ. ಕಾರಣ ಪ್ರತಿ ಐದು ವರ್ಷಕ್ಕೊಮ್ಮೆ ಬಿತ್ತನೆ ಮಾಡಿದ ಬಳಿಕ ಸುರಿಯುವ ಮಳೆಯ ಮಧ್ಯೆಯೇ ಈ ಜಾತ್ರೆ ನಡೆಯುತ್ತಿತ್ತು. ಹೀಗಾಗಿ ಈ ಜಾತ್ರೆ ಮಳೆ ಜಾತ್ರೆ ಅಂತಾನೆ ಫೇಮಸ್ ಆಗಿತ್ತು.
ಆದ್ರೆ ಮಳೆ ಇಲ್ಲದ ಕಾರಣ ಮೂರು ವರ್ಷದ ಹಿಂದೆ ಆಗಬೇಕಿದ್ದ ಜಾತ್ರೆ ಇನ್ನೂ ನಡೆದಿರಲಿಲ್ಲ. ಸದ್ಯ ಬರಗಾಲ ದೂರ ಆಗಿ ಮಳೆ ಬರಲಿ ಅಂತಾ ಪ್ರಾರ್ಥಿಸಿ ಇದೇ ಮೊದಲ ಬಾರಿಗೆ ಬಿಸಿಲಿನ ಮಧ್ಯೆಯೇ ಜಾತ್ರೆ ಮಾಡಿದ್ದು, ಜಾತ್ರೆಯಿಂದ ಗ್ರಾಮದೇವಿ ಮಳೆ ತರುತ್ತಾಳೆ ಅನ್ನೋದು ಜನರ ನಂಬಿಕೆಯಾಗಿದೆ. ಇನ್ನು ಜಾತ್ರೆ ಪ್ರಯುಕ್ತ ನಡೆದ ದೇವಿಯರ ಹೊನ್ನಾಟವಂತೂ ಯುದ್ಧದಂತೆ ರೋಚಕವಾಗಿತ್ತು. ಈ ಜಾತ್ರೆ ಐದು ದಿನಗಳ ಕಾಲ ನಡೆಯುತ್ತದೆ.