ಚಿಕ್ಕೋಡಿ(ಬೆಳಗಾವಿ): ತಾಲೂಕಿನಲ್ಲಿ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಚಿಕ್ಕೋಡಿ ಲೋಕೊಪಯೋಗಿ ಕಚೇರಿಯಲ್ಲಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವರಿಂದ ಚಿಕ್ಕೋಡಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ಈಗಾಗಲೇ ಮಹಾರಾಷ್ಟ್ರದಲ್ಲಿ ಮಳೆ ಪ್ರಾರಂಭವಾಗಿದ್ದು, ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗಿದೆ. ಪ್ರವಾಹದ ಮುಂಜಾಗ್ರತಾ ಕ್ರಮವಾಗಿ ನೀರಾವರಿ ಅಧಿಕಾರಿಗಳು ಮಹಾರಾಷ್ಟ್ರದ ನೀರಾವರಿ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಪ್ರವಾಹ ಸಂಭವಿಸಿದರೆ ಪರಿಸ್ಥಿತಿ ಎದುರಿಸಲು ಸಿದ್ಧರಾಗುವಂತೆ ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸೂಚಿಸಿದರು.
ಚಿಕ್ಕೋಡಿ ಉಪ ವಿಭಾಗದಲ್ಲಿ ಬರುವಂತಹ ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ಸಮಸ್ಯೆಗಳ ಜೊತೆಗೆ ಪ್ರವಾಹ ಪೀಡಿತ ಗ್ರಾಮಗಳಿಗೆ ಇನ್ನೂ ಕೂಡಾ ಮನೆಗಳ ನಿರ್ಮಾಣಕ್ಕೆ ಸರಿಯಾದ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ ಎಂದು ತಾಲೂಕು ಪಂಚಾಯತ್ ಸದಸ್ಯ ರವಿ ಮಿರ್ಜೆ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ತಾಂತ್ರಿಕ ಸಮಸ್ಯೆ ಹಾಗೂ ಜಿಪಿಎಸ್ ಸಮಸ್ಯೆಯಿಂದ ಸ್ವಲ್ಪ ವಿಳಂಬವಾಗಿದೆ. ಆದಷ್ಟು ಬೇಗ ಫಲಾನುಭವಿಗಳ ಸಮಸ್ಯೆ ನಿವಾರಿಸಲಾಗುವುದು ಎಂದರು.
ಟಿಸಿ ಅಳವಡಿಸಲು ರೈತರಿಂದ ಹೆಸ್ಕಾಂ ಅಧಿಕಾರಿಗಳು ಕಮಿಷನ್ ಪಡೆಯುತ್ತಾರೆ ಎಂದು ವಿಧಾನ ಪರಿಷತ್ ಮುಖ್ಯ ಸಂಚೇತಕ ಮಹಾಂತೇಶ ಕವಟಗಿಮಠ ಹೆಸ್ಕಾಂ ಅಧಿಕಾರಿಗಳ ವಿರುದ್ಧ ನೇರವಾಗಿ ಆರೋಪಿಸಿದರು. ಇದಕ್ಕೆ ಸಂಬಂಧಿಸಿದ ಹೆಸ್ಕಾಂ ಅಧಿಕಾರಿಗಳು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಚಿಕ್ಕೋಡಿ ಉಪ ವಿಭಾಗದಲ್ಲಿ ಸೊಯಾಬಿನ್ ಕಳಪೆ ಬೀಜ ವಿತರಿಸಿದ್ದಾರೆ ಎಂದು ತಾಪಂ ಸದಸ್ಯನ ಆರೋಪಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ, ಬಿತ್ತನೆ ಮಾಡಿದ ಬೀಜ ಕಳಪೆ ಗುಣಮಟ್ಟದಾಗಿದ್ದರೆ ಅಂತಹ ರೈತರಿಗೆ ಒಂದು ಏಕರೆಗೆ 3 ಸಾವಿರ ರೂ. ಅಥವಾ ಬದಲಾಗಿ ಸೊಯಾಬಿನ್ ಬೀಜ ನೀಡಲಾಗುವುದು ಎಂದು ಹೇಳಿದರು.