ಬೆಳಗಾವಿ: ಕೇಂದ್ರ ಸಚಿವ ಸುರೇಶ್ ಅಂಗಡಿಯವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಗೆ ಇನ್ನೂ ದಿನಾಂಕ ಘೋಷಣೆ ಆಗಿಲ್ಲ. ಆದ್ರೆ, ಬಿಜೆಪಿಯಲ್ಲಿ ಮಾತ್ರ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಾ ಹೋಗುತ್ತಿದೆ. ಇದರಿಂದ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡ್ರೆ ಅದರ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಪಕ್ಷ ಮುಂದಾಗಿದೆ.
ಗೆಲವು ಸಾಧಿಸಲೇಬೇಕೆಂಬ ನಿಟ್ಟಿನಲ್ಲಿ ಕಾಂಗ್ರೆಸ್ನ ಡಿಕೆ ಶಿವಕುಮಾರ್, ಎಂ.ಬಿ.ಪಾಟೀಲ ನೇತೃತ್ವದಲ್ಲಿ 11 ಸದಸ್ಯರ ಸಮಿತಿಯೊಂದನ್ನು ರಚನೆ ಮಾಡಿದ್ದಾರೆ. ಒಂದು ಸಭೆ ಬೆಳಗಾವಿಯಲ್ಲಿ ಮತ್ತೊಂದು ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿದ್ದು, ಬೆಳಗಾವಿ ಬೈ ಎಲೆಕ್ಷನ್ಗೆ ಅಭ್ಯರ್ಥಿ ವಿಚಾರದಲ್ಲಿನ ಗೊಂದಲ ಮುಂದುವರೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಇಬ್ಬರ ಪ್ರಭಾವಿ ನಾಯಕರ ಹೆಸರಿಗೆ ಮತ್ತೊಬ್ಬರು ಸೇರಿಕೊಂಡಿದ್ದಾರೆ. ಆ ಪೈಕಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಇದೀಗ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಹೆಸರು ಬೈಎಲೆಕ್ಷನ್ ಅಭ್ಯರ್ಥಿಯಾಗಿ ಪ್ರಸ್ತಾಪವಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿಜೆಪಿ ತನ್ನ ಅಭ್ಯರ್ಥಿ ಹೆಸರನ್ನು ಘೋಷಿಸುವವರೆಗೂ ತನ್ನ ಪಕ್ಷದ ಅಭ್ಯರ್ಥಿಯ ಹೆಸರು ಬಹಿರಂಗ ಪಡಿಸುವುದಿಲ್ಲ ಎಂಬ ಮಾತುಗಳು ಜೋರಾಗಿಯೇ ಕೇಳಿಬರುತ್ತಿದೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದನ್ನು ಸೂಕ್ಷವಾಗಿ ಗಮನಿಸುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರು ಗೆಲ್ಲಲು ಬೇಕಾದ ಎಲ್ಲಾ ತಯಾರಿ ನಡೆಸಿದ್ದಾರೆ.
ಈಗಾಗಲೇ ಒಂದು ಸುತ್ತಿನ ಸಭೆ ಎಂ.ಬಿ ಪಾಟೀಲ್ ನೇತೃತ್ವದಲ್ಲಿ ನಡೆದಿದ್ದು, ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಮೂವರು ಶಾಸಕರ ಹೆಸರನ್ನು ಕಾರ್ಯಕರ್ತರು ಪ್ರಸ್ತಾಪ ಮಾಡಿದ್ದು, ಸಭೆಯಲ್ಲಿ ಯಾವ ನಿರ್ಣಯ ಕೈಗೊಳ್ಳಲಾಗಿದೆ ಎಂಬ ವಿಚಾರವನ್ನು ಬಿಟ್ಟುಕೊಟ್ಟಿಲ್ಲ.