ಚಿಕ್ಕೋಡಿ (ಬೆಳಗಾವಿ) : ಯಾವುದೇ ಸಂತ, ಸಾಧು, ಮುನಿಗಳ ಹತ್ಯೆ ಮಹಾಪಾಪ. ಇಂತಹ ಕೃತ್ಯಗಳ ಹಿಂದೆ ಭಾರತ ದೇಶ ಒಡೆಯುವ ಷಡ್ಯಂತ್ರ ಇರುತ್ತದೆ ಎಂದು ಮುನಿಶ್ರೀ ಅಜಯ್ ಸಾಗರ ಹೇಳಿದರು. ಜಿಲ್ಲೆಯ ಸದಲಾಗ ಪಟ್ಟಣದಲ್ಲಿ ಹಿರೇಕೋಡಿ ನಂದಿ ಪರ್ವತದ ಜೈನ ಆಚಾರ್ಯ ಜಿನೈಕ್ಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಖಂಡಿಸಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತ ಅಹಿಂಸಾ ಧರ್ಮದ ಮೇಲೆ ಇಲ್ಲಿಯವರೆಗೆ ಬಂದು ತಲುಪಿದೆ. ಜೈನಮುನಿಗಳ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಮುಂದೆ ಯಾವುದೇ ಸಾಧು ಸಂತರ ಮೇಲೆ ಈ ರೀತಿಯ ಕೃತ್ಯ ನಡೆಯಬಾರದು ಎಂದರು.
ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಘಟನೆಯಿಂದ ಇಡೀ ಮನುಕುಲಕ್ಕೆ ಬಹಳ ದೊಡ್ಡ ಆಘಾತವಾಗಿದೆ. ಭಾರತ ದೇಶ ಧರ್ಮ ಪ್ರಧಾನ ದೇಶ. ಸರ್ವಧರ್ಮ ಸಮಭಾವ ಇರುವ ದೇಶ. ಭಾರತ ಧ್ವಜದ ಕೆಳಗೆ ವಿವಿಧ ಧರ್ಮ, ಜಾತಿಯ ಜನರಿದ್ದಾರೆ. ಸಂತರಿಗೆ ಈ ರೀತಿ ಮಾಡುವುದು ಭಾರತವನ್ನು ಒಡೆಯುವ ಷಡ್ಯಂತ್ರ ಎಂದು ಹೇಳಿದರು.
ಮಾನವೀಯತೆಯ ಹತ್ಯೆ ಆಗುತ್ತಿದೆ. ಇದರಲ್ಲಿ ರಾಜಕಾರಣ ಮಾಡಬಾರದು. ಧರ್ಮ ಸುರಕ್ಷಿತವಾಗಿದ್ದರೆ ರಾಷ್ಟ್ರ ಸುರಕ್ಷಿತವಾಗಿರುತ್ತದೆ. ಧರ್ಮದಲ್ಲಿ ರಾಜಕೀಯ ಬಂದರೆ ಧರ್ಮ ಕೆಡುತ್ತದೆ. ಆದ್ರೆ ರಾಜಕೀಯದಲ್ಲಿ ಧರ್ಮ ಬಂದರೆ ಶುದ್ಧೀಕರಣ ಆಗುತ್ತದೆ. ಜೈನಮುನಿಗಳ ಹಂತಕರಿಗೆ ಉಗ್ರ ಶಿಕ್ಷೆಯಾಗಲಿ. ಎಷ್ಟು ಉಗ್ರ ಶಿಕ್ಷೆಯಾಗಬೇಕು ಅಂದರೆ ಮುಂದೆ ಯಾರೂ ಈ ರೀತಿ ಕೃತ್ಯ ಮಾಡಬಾರದು ಅಂತಹ ಶಿಕ್ಷೆ ನೀಡಬೇಕು ಎಂದು ಮುನಿಶ್ರೀ ಆಗ್ರಹಿಸಿದರು.